ಕನಸಿನ ಊರಿಗೆ ಕರೆದಿಹನವನು ಬಾ ಎಂದು ನನ್ನ
ದಾರಿಯ ಕೇಳಲು ಮರೆತೇಬಿಟ್ಟೆನು ನಾ ಹೊರಡುವ ಮುನ್ನ
ವಿಳಾಸ ನೀಡದೆ ಕಾಡಿದನವನು ಇದೆಂಥ ಆಹ್ವಾನ
ನನ್ನನು ಕರೆಯುತ ತಾನೇ ತಂದಿಹ ಚೆಂದದ ಸಿಹಿ ಸ್ವಪ್ನ
ಕನಸಲ್ಲಾದರೂ ಅವನೆದೆಯರಮನೆ ನೋಡಲು ನನಗಾಸೆ
ಗೋಡೆಗೋಡೆಯಲೂ ನನ್ನದೆ ಚಿತ್ರವ ಬಿಡಿಸುವ ಮಹದಾಸೆ
ನನ್ನಯ ಚಿತ್ರವು ನೆನಪಿಸುತಿರಲಿ ಅವನಿಗೆ ನನ್ನೊಲವ
ಮರೆಯಬಾರದು ಅವನೆಂದೂ ನಮ್ಮಿಬ್ಬರ ಬಂಧನವ
ಕೈ ಕೈ ಹಿಡಿದು ಕಡಲತೀರದಿ ದೂರಕೆ ನಡೆವಾಸೆ
ಮನದಾಳದ ಮಾತನು ತುಟಿಕಚ್ಚಿ ಕಣ್ಣಲ್ಲೆ ತಿಳಿಸುವಾಸೆ
ನನ್ನ ಕಣ್ಣಿನ ಕಾಗುಣಿತಗಳ ಅವನೋದಬಲ್ಲನೆ? ನಾನರಿಯೆ!
ಅರ್ಥ ಮಾಡಿಸುವ ತವಕ ನನ್ನದು ಫಲಿಸೀತೇ ಇದು ನಾ ತಿಳಿಯೆ?
ಹೇಗೋ ಇದ್ದೆ ಹೇಗೋ ಆಗಿಹೆ ಎಲ್ಲವು ಅವನಿಂದ
ಗಮನಕೆ ಬರದೇ ಎದೆಯೊಳಗಿದ್ದ ನೋಡಿದ ಕ್ಷಣದಿಂದ
ಹೇಳಲು ಧೈರ್ಯ ಸಾಲದೆ ಹೋಯ್ತು ಮೂಕವಾಯ್ತು ಹೃದಯ
ಒಡನಾಟದಲೇ ಹಿರಿಹಿರಿ ಹಿಗ್ಗಿದ ಕ್ಷಣಗಳು ವರ್ಣಮಯ
ತಂದ ಪುಣ್ಯವು ಸಾಲದೆ ಹೋಯ್ತು ಪಡೆಯಲು ನಾನವನ
ಬತ್ತದ ಒಲವಿನ ಒರತೆಯ ತಂದ ಅಪೂರ್ವ ಸ್ನೇಹಿತನ
ಅವನ ನೆನಪದು ಸುಳಿಯದ ಕ್ಷಣಗಳು ಹುಡುಕಿದರೂ ಸಿಗದು
ಈ ಪರಿ ಕಾಡುವ ಅವನೊಲವಿಗೆ ಇನ್ನು ಹೆಸರೇನಿಡಬಹುದು?
ಓ ಕನಸುಗಳೆ ನೀವಾದರು ತಂದು ನನಗೊಪ್ಪಿಸಿ ಅವನನ್ನು
ಅವನ ಕನಸಿನ ದಾರಿಯ ಹುಡುಕುತ ನಾ ಸುಸ್ತಾಗಿಹೆನು
ಅಂಚೆಪೆಟ್ಟಿಗೆಗೆ ನನ್ನನೆ ಹಾಕಿಹೆ ಹೋಗಲು ಕನಸೊಳಗೆ
ನಾ ಪಟ್ಟಿಹ ಸಂಭ್ರಮವೆಲ್ಲವೂ ಕೂಡ ಸಿಗಲೇಬೇಕು ಅವಗೆ.
Thursday, March 5, 2009
Subscribe to:
Post Comments (Atom)
No comments:
Post a Comment