Thursday, November 8, 2012

ಸೊರಗಬೇಡೆನ್ನ ಕನಸೇ



ಓ ನನ್ನ ಕನಸೆ ನೀ ಯಾಕೆ ಸೊರಗುತಿಹೆ ಒಳಗೊಳಗೆ?
   ನೀ ಚೆಲ್ಲಿ ಸೂಸಿದ್ದ ಬೆಳಕು ಚದುರುತಿದೆ ನಿಶೆಯೊಳಗೆ
   ನಾ ಹೇಗೆ ಹಿಡಿದಿಡಲಿ ಚಿಮ್ಮೊ ಭಾವಗಳ ಸವಿ ಕಲರವವ
   ತಾ ನನ್ನ ಬಳಿಗಿಂದು ಹೊಸ ಬಣ್ಣದೋಕುಳಿಯ ಸಿಂಚನವ
   ಒಮ್ಮೆ ನೀನು ನನ್ನ ನೋಡಿ ಮರುಕ ತೋರು ಓ ಕನಸೆ.

ಸುಖ ನಿದ್ರೆಯಲು ಕಣ್ಣಿನ ಒಳಗೆ ನಿನ್ನದೆ ಮಿಸುಕಾಟ
   ತೆರೆದ ಕಣ್ಣಲೂ ಶೂನ್ಯದ ಒಳಗೆ ನಿಂದೇ ತಕಧಿಮಿತ

   ಅತಿಶಯವಿಲ್ಲ ಅನುಭವವೆಲ್ಲ ನನ್ನಯ ಪರಿ ಇಂತು
   ಹೀಗೆ ನೀನು ಕಾಡುವಾಗ ನನ್ನ ನೆಮ್ಮದಿ ಇನ್ನೆಲ್ಲಿ?

   ಡಂಗುರ ಸಾರಿ ಹೇಳಿದೆ ಕೂಗಿ ನಿನ್ನಯ ಉಪಟಳವ
   ಸಿಹಿ ನೋವಲೂ ನಾ ಕಂಡಿಹೆ ನೂತನ ಅನುಭಾವ
   ಅರಗಿಸಲಾಗದ ಮರೆತಿರಲಾಗದ ಏನಿದು ಈ ಗೋಳು?
   ಅಲ್ಲಿ  ಇಲ್ಲಿ ಎಲ್ಲೂ ಇಲ್ಲ ನನ್ನ ಪ್ರಶ್ನೆಗೆ ಪರಿಹಾರ

   ಕಲುಶಿತವಾದ ಭಾವಗಳೆಲ್ಲವ ಪಾವನ  ಗೊಳಿಸುವೆಯಾ?
   ಹೆಸರೇ ಇಲ್ಲದ ಕಾಮನೆಗೊಂದು ಅರ್ಥವ ನೀಡುವೆಯಾ?
   ಹುಸಿ ಸಂಬಂಧಗಳ ಪರಿ ಪಾಲನೆಯು ಇನ್ನೆಲ್ಲಿಯವರೆಗೆ?
   ವ್ಯರ್ಥವಾಯ್ತು ವೇಳೆಯಿಲ್ಲಿ ಇದೇ ಮಂಥನದೊಳಗೆ
  
   ಅಪಚಾರವನು ನೀ ಎಸಗದಿರು ನನ್ನಯ ನಂಬಿಕೆಗೆ
   ಅಪರೂಪಕೆ ನಾನೊಪ್ಪಿರುವೆ ನಿನ್ನ ವಿನಂತಿಕೆಗೆ
   ಕ್ಷೀಣಿಸದಿರಲಿ ಕ್ಷಯಿಸದೆ ಇರಲಿ ಹೃದಯದ ಸೆಳೆತಗಳು
   ಕಾದು ನಾನು ಕುಳಿತಿರುವಾಗ ಹೃದಯದ ಕರೆಯನು ರಿಂಗಣಿಸಿ         
 

No comments: