Sunday, August 31, 2008

ಗಿಣಿಯೆ ನೀ ಹಾರಿ ಬಾ

ಹಾರಿ ಬಾ ಅರಗಿಣಿಯೆ ನೀ ಹಾರಿ ಬಾ
ಎಲ್ಲ ಬಂಧನ ತೊರೆದು ಪಂಜರವ ನೀ ಮುರಿದು
ನಿನ್ನಂತೆ ಬದುಕಲು ನೀ ಹಾರಿ ಬಾ
ಚಿತ್ತಾರ ಗಗನವಿದೆ ವಿಸ್ತಾರ ಭೂಮಿಯಿದೆ
ದುಸ್ತರದ ಬದುಕೇಕೆ ನೀ ಹಾರಿ ಬಾ

ಪ್ರೀತಿಯದು ಪಂಜರ ಸ್ನೇಹವದು ಅಂಬರ
ಪ್ರೀತಿ ಸ್ನೇಹದ ನಡುವೆ ನೆಲಮುಗಿಲ ಅಂತರ
ಒಲವೊಂದು ಬಂಧನ ಗೆಳೆತನವೆ ನಂದನ
ಬಂಧನವ ಬಿಡಿಸಿ ನೀ ನಂದನಕೆ ಹಾರಿ ಬಾ

ಒಲವನ್ನು ತೋರಲು ಬಂಧಗಳ ಹೊರೆಯೇಕೆ?
ಸೆರೆಯಲ್ಲೇ ಬಳಲುವ ಸಂದಿಗ್ಧ ಬದುಕೇಕೆ?
ದೇಹಕಿದೆ ನಿರ್ಬಂಧ ಮನಸ್ಸೆಂದು ಸ್ವಚ್ಛಂದ
ಸ್ವೇಚ್ಛೆಯ ಲೋಕದಲಿ ವಿಹರಿಸೆ ಹಾರಿ ಬಾ

ತಮ್ಮ ತನವನು ಕಸಿದು ವೈಭೋಗವಿತ್ತರೆ
ಹಾರಿಹೋಗುವ ಆಸೆ ಮನವೆಲ್ಲ ತುಂಬಿರೆ
ಅನ್ನವದು ಒಗ್ಗೀತೆ ದೇಹಕದು ದಕ್ಕೀತೆ
ಉಕ್ಕುತಿಹ ಬಯಕೆಗಳ ದಕ್ಕಿಸಲು ಹಾರಿ ಬಾ

ಮುಗ್ಧತೆಯೆ ನಿನಗೆಂದು ಮುಳುವಾಗದಿರದಂತೆ
ಬಾಳಿನಾ ಬದ್ಧತೆಯ ಪೊರೈಸು ಬಿಡದಂತೆ
ಎಲ್ಲ ಕೋಟೆಯ ದಾಟಿ ಎಲ್ಲ ಭಾವವ ಮೀಟಿ
ಬಿದ್ದಲ್ಲೇ ಎದ್ದು ನೀ ಗೆದ್ದು ಬದುಕಲು ಬಾ

ಸಕಲ ಜೀವಿಗಳಲ್ಲು ಸ್ವಾತಂತ್ರ್ಯದಾ ಬಯಕೆ
ತಪ್ಪಲ್ಲ ಪೂರಕವು ಪ್ರಕೃತಿಯ ನಿಯಮಕೆ

ಪ್ರೀತಿಯನು ಬಂಧಿಸದೆ ನೀತಿಗಳ ಕೊಲ್ಲದೆ
ನೀತಿಯ ರೀತಿಯನು ಈ ಜಗಕೆ ಸಾರು ಬಾ

No comments: