Saturday, October 11, 2008

ಅಂತರಂಗ

ನಗುವ ಕಣ್ಣಿನಾಳದಲ್ಲಿ ನೂರೆಂಟು ನೋವಿದೆ
ನೋವ ಕಂಡು ಸಂತೈಸಲು ಹೃದಯವೊಂದು ಬೇಕಿದೆ
ನಗುಮೊಗದ ಮುಖವಾಡ ಹೊತ್ತು ಸಾಕಾಗಿದೆ
ಅಂತರಂಗ ತೆರೆದು ಮನವು ಹಗುರಾಗ ಬಯಸಿದೆ

ನೋವಿನಲ್ಲೂ ನಗುವ ಕಲೆಯು ಇನ್ನೂ ಯಾಕೆ ಬೇಕು
ತಾನೇ ಉರಿದು ಬೆಳಕಕೊಡುವ ಹಣತೆಗೆಲ್ಲಿ ಬದುಕು
ದುಃಖದಲ್ಲಿ ಪಾಲುಕೊಡಲು ಯಾಕೋ ಮನಸೇ ಇಲ್ಲ
ಸುಖದ ಪಾಲು ಕೇಳಲು ಎಲ್ಲ ಇರುವರಲ್ಲ

ಪ್ರೀತಿ ಬಯಸೋ ಮನಸಿಗೆ ಎಷ್ಟು ನೋವು ಕೊಟ್ಟರು?
ವರವ ಬಯಸಿ ಬಂದರೆ ಶ್ಯಾಪವ್ಯಾಕೆ ಇಟ್ಟರು?
ಬದುಕೆಂಬದು ಎಲ್ಲರಿಗೂ ದೈವ ಕೊಡುವ ಭಿಕ್ಷೆ
ಇನ್ನು ಕೆಲವು ಮನಸಿಗೆ ಯಾರೋ ಕೊಟ್ಟ ಶಿಕ್ಷೆ

ಬದುಕು ಸಾವು ಎರಡರಲ್ಲಿ ಏನಿಹುದು ಅಂತರ
ಸತ್ತು ಸತ್ತು ಬದುಕುವ ಕಾಯಕವು ನಿರಂತರ
ಸತ್ತೂ ಬದುಕಿ ಉಳಿದಿಹರು ಹಲವು ಪುಣ್ಯ ಪುರುಷರು
ಬದುಕಿಯೂ ಸತ್ತಿಹರು ಇಲ್ಲಿ ಕೆಲವು ದೀನರು

ಹೃದಯದಾಳದಲ್ಲಿ ಇರುವ ಬಯಕೆ ಯಾರು ಬಲ್ಲರು?
ಹುಡುಕೋ ನೆಪದೆ ಕಲ್ಲು ಹೊಡೆದು ತಿಳಿನೀರ ಕಲಕಿದರು
ನಾಟಕದ ನಡತೆಯಲ್ಲಿ ಬದುಕೇ ಕಳೆದು ಹೋಗಿದೆ
ಕಳೆದ ಗಳಿಗೆ ಬಾರದೆಂದು ಆಸೆ ಕಮರಿ ಹೋಗಿದೆ.

ಓ ಮನಸೇ

ಮನಸೇ ಓ ಮನಸೇ ನೀ ನನ್ನ ಮಾತು ಕೇಳು
ಓಡದಿರು ಎಲ್ಲೆಲ್ಲೋ ನಿನಗ್ಯಾಕೆ ಇಂಥ ಗೀಳು
ಬೇಲಿ ಹಾಕಲಾರೆ ನಿನಗೆ ನೀಡಬೇಡ ಗೋಳು
ಹದ್ದು ಮೀರಿ ಹೋದರೆ ನೀ ನನ್ನ ಬದುಕು ಹಾಳು

ನೆನಪ ಬುತ್ತಿ ಬಿಚ್ಚಬೇಡ ಕಹಿಯ ಪಾಲೇ ಹಿರಿದಿದೆ
ಮರೆವು ಒಂದು ವರವಾಗಿದೆ ಭವಿತವ್ಯದ ಒಳಿತಿಗೆ
ಕಹಿ ನೆನಪ ಕರೆತಂದರೆ ಜೊತೆಗೆ ಕಹಿಯು ಬರುತಿದೆ
ನಿನ್ನೆಗಳ ಗೊಡವೆ ಬೇಡ ಬರುವ ನಾಳೆ ಕಾದಿದೆ

ಯಾರ ಮನಸ ತಟ್ಟದಿರು ನೀ ಯಾರ ಹೃದಯ ಮುಟ್ಟದಿರು
ಯಾರೂ ನಿನ್ನ ಮುಟ್ಟದಂತೆ ನೀ ಇನ್ನು ಗಟ್ಟಿಯಾಗಿರು
ಸಾಂತ್ವನವ ನೀಡುತಿರು ನನ್ನೆಲ್ಲ ನೋವಿನಲ್ಲು
ಕೈ ಬಿಡದೆ ನಡೆಸು ನೀ ನನ್ನೆಲ್ಲ ಸೋಲಿನಲ್ಲು

ಆಯ್ಕೆಗಳು ನಿನಗಿರಲಿ ನಾ ನಿನ್ನೇ ನಂಬಿ ನಡೆವೆ
ದ್ವಂದ್ವಗಳ ತರಬೇಡ ಆಯ್ಕೆಗಳ ನಡುವೆ
ವಿಷಾದವೆಂದು ಬರದಿರಲಿ ಎಲ್ಲ ಮುಗಿದ ಮೇಲೆ
ಸನ್ಮಾರ್ಗದಿ ನಡೆಸೆನ್ನ ಭರವಸೆಯಿದೆ ನಿನ್ನ ಮೇಲೆ

ನೋವೆಲ್ಲ ಮರೆಸಿ ನೀ ನಲಿವುಗಳ ನೆನಪಿಡು
ದ್ವೇಷ ಹಟವನೆಲ್ಲ ಮರೆಸಿ ತಪ್ಪುಗಳ ಕ್ಷಮಿಸು
ವಿಕಾರವೆಲ್ಲ ತೊರೆದು ನೀ ಪ್ರೀತಿಯೊಂದೆ ಹಂಚು
ಜಗವನ್ನೇ ಗೆಲ್ಲುವ ವಿಶ್ವಾಸ ನನಗೆ ತುಂಬು

ನೆನಪಾಗೇ ಉಳಿದೆ

ನೀನೊಂದು ನೆನಪಾಗೇ ಉಳಿದೆ
ನನಸೆಂದುಕೊಂಡೆ ಕನಸಾಗಿ ಹೋದೆ
ನೀನೊಂದು ಕಥೆಯಾಗಿ ಬಂದೆ
ಬದುಕೆಂದುಕೊಂಡೆ ವ್ಯಥೆಯಾಗಿ ಹೋದೆ

ನಿನ್ನ ಕಂಡ ಆ ಕ್ಷಣವೆ ಹೃದಯ ಅರಳಿ ನಲಿದಿತ್ತು
ಕಣ್ಣುಗಳು ಕಲೆತಾಗ ಆಸೆಗಳು ಚಿಗುರಿತ್ತು
ನೀನೆದುರು ಬಂದಾಗ ನಾಲಿಗೆಯು ತೊದಲಿತ್ತು
ನೂರಾರು ಮಾತುಗಳು ಎದೆಯಲ್ಲೇ ಉಳಿದೋಯ್ತು

ನಿನ್ನ ಕಣ್ಣ ಶೋಧಿಸಿ ಕಾಮನೆಗಳ ಹುಡುಕಿದೆ
ತುಂಟ ನಗುವ ಬಿಟ್ಟು ಬೇರೇನು ಕಾಣದಾದೆ
ಚಡಪಡಿಸಿದೆ ಅಂದು ನಾ ಬಯಕೆ ಹೇಳಲಾರದೆ
ಗೊತ್ತಿದ್ದೂ ನಟಿಸಿದೆ ನೀ ನನ್ನ ಒಲವ ಒಪ್ಪದೇ

ಸ್ನೇಹದ ಬೇಲಿ ದಾಟಿ ಪ್ರೀತಿ ಹೂವು ಅರಳಿತ್ತು
ಜೊತೆಯಾಗಿ ಬಾಳಲು ಮೂರು ಗಂಟು ಬೇಕಿತ್ತು
ನಿನ್ನೊಲವಿನ ಕುಸುಮ ಯಾರೆದೆಯಲಿ ಅರಳಿತೋ?
ಯಾರ ಪ್ರೀತಿಗಾಗಿ ಅಂದು ನಿನ್ನ ಮನವು ಬಯಸಿತೋ?

ಮರೆತು ಕೂಡ ಮರೆಯೆ ನಾ ನಿನ್ನಯ ಸವಿನೆನಪು
ಎಲ್ಲೇ ಇರು ಹೇಗೇ ಇರು ಸಂತೋಷದಿ ಬದುಕು
ನಿನ್ನ ಕೈಯ ಹಿಡಿದ ಆ ಜೀವವದು ಧನ್ಯ
ಮನಸು ಮನಸು ಬೆರೆತರೇನೇ ಬಾಳೆಂದೂ ಮಾನ್ಯ

ಬದುಕೇ ನೀ ಕಾಡಬೇಡ

ಬದುಕೇ ನನಗೆ ನಿನ್ನ ಮೇಲೆ ಯಾವ ದೂರು ಇಲ್ಲ
ನೀ ಕೇಳೋ ಪ್ರಶ್ನೆಗಳಿಗೆ ಉತ್ತರವೇ ಸಿಗುತಿಲ್ಲ
ನೀನೇ ಒಂದು ಪ್ರಶ್ನೆಯಾಗಿ ನನ್ನ ಮುಂದೆ ನಿಂತಿಹೆ
ಉತ್ತರವ ಹುಡುಕಿ ಹುಡುಕಿ ನಿನ್ನೆದುರು ಸೋತಿಹೆ

ಯಾವ ಯಾವ ತಿರುವುಗಳಿಗೆ ನನ್ನ ಎಳೆಯುತಿರುವೆ
ಬದಲಾವಣೆಗಳ ಒಪ್ಪಲು ಸಮಯ ಬೇಕು ತಿಳಿಯದೇ?
ಬದುಕಲ್ಲಿ ತಿರುವುಗಳು ತುಂಬ ಸಹಜ ತಿಳಿದಿದೆ
ತಿರುವುಗಳೇ ಬದುಕಾದರೆ ಬಾಳ ಪಯಣ ಸಾಧ್ಯವೇ?

ಧನಕನಕ ಬೇಡುತಿಲ್ಲ ನೀಡು ನನಗೆ ಶಾಂತಿಯ
ಕೋಲಾಹಲ ಎಬ್ಬಿಸದೆ ಮರೆಸಿಬಿಡು ಕ್ರಾಂತಿಯ
ಒಂಟಿಯಾಗಿ ನಿನ್ನೆದುರಿಸೋ ಗುಂಡಿಗೆ ನನಗಿಲ್ಲ
ನಂಟುಗಳೇ ಗಂಟಾಗಿವೆ ಬಿಡಿಸಲಾಗುತಿಲ್ಲ

ನಾ ಇದ್ದು ಕೂಡ ಇರಲಾರೆ ಈ ನಿನ್ನ ಆಟದಲ್ಲಿ
ನಟಿಸಿ ಕೂಡ ನಟಿಸಲಾರೆ ಈ ನಿನ್ನ ನಾಟಕದಲ್ಲಿ
ಪಾತ್ರಕೊಂದು ಜೀವ ತುಂಬೋ ಯತ್ನ ಇಲ್ಲಿ ನಡೆಸಿಹೆ
ಕೊನೆಕ್ಷಣಗಳವರೆಗೂ ನಟನೆ ಮುಂದುವರೆಸುವೆ

ಹತಾಶೆ ಎಲ್ಲ ಮರೆತು ನಾ ನಿನ್ನ ಒಪ್ಪಿಕೊಂಡಿಹೆ
ನೀ ಬಂದ ಹಾಗೆ ಸ್ವೀಕರಿಸುವ ಪ್ರಯತ್ನವ ನಡೆಸಿಹೆ
ಅತಿಯಾಗಿ ನೀನು ಕಾಡಬೇಡ ಉತ್ಸಾಹ ಕುಂದಬಹುದು
ನೀನೇ ಬೇಡವಾಗಿ ಸಾವಿಗೆ ಮುಖಮಾಡಬಹುದು

ತಪ್ಪಿದ ದಾರಿ

ಎಲ್ಲಿ ತಪ್ಪಿತು ಈ ಬದುಕಿನ ದಾರಿ?
ಹೇಗೆ ತಲುಪಲಿ ಕನಸಿನ ಆ ಗುರಿ?
ಮುಂದಿನ ಹಾದಿಯ ನೆನೆದರೆ ಗಾಬರಿ
ತಳಮಳವೇಕೆ ಕಾಡಿದೆ ಈ ಪರಿ?

ಸಮಯದ ಆಟವೋ ವಿಧಿಯ ಕಾಟವೋ
ಕೈ ಜಾರಿ ಹೋಗಿದೆ ಆ ಕನಸು
ತಪ್ಪಿದ ತಾಳಕೂ ಒಪ್ಪದ ಮೇಳಕೂ
ನಡೆಯಲೇ ಬೇಕು ಇದೇ ನನಸು

ನೆನೆಯುವುದೊಂದು ನಡೆಯುವುದೊಂದು
ಎಲ್ಲರ ಬದುಕಲು ಹೀಗೇನಾ?
ಕಾಣದ ಕೈಯದು ಸೂತ್ರವ ಹಿಡಿದಿದೆ
ಜಯಿಸುವ ಪರಿಯ ಕಾಣೆನು ನಾ

ಕನಸಿನ ಮೂಟೆಯೆ ಮನದೊಳಗಿತ್ತು
ಎಲ್ಲವು ಈಗ ಧೂಳಿಪಟ
ಬೆಂದಿಹ ಮನದಲಿ ಗುರಿಗಳೇ ಇಲ್ಲ
ಸೂತ್ರ ಹರಿದಿಹ ಗಾಳಿಪಟ

ಯಾರ ಶಾಪವೋ ಯಾರ ಪಾಪವೋ
ಸೋಕಿತು ನನ್ನೀ ಬದುಕನ್ನು?
ಒಲ್ಲದ ಒಲವಿನ ಬಾಳ ನೌಕೆಯ
ನಡೆಸುವ ಪರಿಯು ಹೇಗಿನ್ನು?

ದಿಕ್ಕು ತಪ್ಪಿತೋ ಹೆಜ್ಜೆ ಎಡವಿತೋ
ಕಲ್ಲುಮುಳ್ಳುಗಳೇ ಇವೆ ಇಲ್ಲಿ
ತಿಳಿವುದರೊಳಗೇ ಸಾಗಿಹೆ ದೂರ
ಹಿಂತಿರುಗಿ ಬಾರದಾ ರೀತಿಯಲಿ

ಬೆಳ್ಳಿಮೋಡಗಳೆ

ನೀಲಿ ಬಾನಿನ ಬೆಳ್ಳಿಮೋಡಗಳೆ ಓಡುತಿರುವಿರಿ ಎಲ್ಲಿಗೆ?
ಯಾವ ಗಾಳಿಯು ಬೀಸಿ ತಂದಿದೆ ನಿಮ್ಮನಿಲ್ಲಿಯವರೆಗೆ?
ಆದಿ ತಿಳಿಯದ ಅಂತ್ಯ ಕಾಣದ ನಿಮ್ಮ ಪಯಣ ಎಲ್ಲಿಗೆ?
ಯಾವ ಪ್ರೇಮಿಯು ಇತ್ತ ಸುದ್ದಿಯ ಒಯ್ಯತಿರುವಿರಿ ಯಾರಿಗೆ?

ರವಿಯ ವರವೋ ಶಶಿಯ ಕೊಡುಗೆಯೋ ಎಲ್ಲಿಂದ ಬಂತು ಈ ಬಣ್ಣ?
ಬಾನಿನಂಗಳದೆ ಜೂಟಾಟವಾಡಿ ತಣಿಸಿ ನೋಡುಗರ ಕಣ್ಣ
ಒಮ್ಮೆ ಈ ತರ ಇನ್ನೊಮ್ಮೆ ಆ ತರ, ತರತರದ ನಿಮ್ಮ ಆಕಾರ
ಮಂದ ಮಾರುತ ಬೀಸಿ ಬರೆದಿದೆ ನಿಮ್ಮ ಚದುರಿಸಿ ಚಿತ್ತಾರ

ಸಂಜೆ ಸೂರ್ಯನ ಕೆಂಪು ಕಿರಣವು ನಿಮಗೆ ಬಣ್ಣವ ಹಚ್ಚಿದೆ
ರಂಗುರಂಗಿನ ರಂಗೋಲಿಯಾಗಿ ನಿಮ್ಮ ಅಂದವು ಹೆಚ್ಚಿದೆ
ಹುಣ್ಣಿಮೆಯ ಇರುಳ ಹಾಲ ಬೆಳದಿಂಗಳಿಗಾಗಿ ಕಾಯುವಿರಾ ನೀವು?
ಮಿನುಗೋ ತಾರೆಗಳ ಮೈಯ ಸವರಿ ಚೆಲ್ಲಾಟವಾಡುವಿರೇನು?

ಚಂದ್ರ ನಾಚಿ ಮರೆಯಾಗಿ ಹೋಗುವ ನಿಮ್ಮ ಅಂದ ಹೆಚ್ಚಿದಾಗ
ಹೊಳೆವ ತಾರೆಗಳೆ ಸುಮ್ಮನಿರುವುದು ನಿಮ್ಮ ಚಂದ ನೋಡಿದಾಗ
ಕಡಲ ಮಕ್ಕಳೆ ಏನಿಷ್ಟು ಅವಸರ ನಾನು ಬರುವೆನು ನಿಲ್ಲಿರಿ
ನಿಮ್ಮನೇರಿ ಜಗವೆಲ್ಲ ನೋಡುವೆನು ನನ್ನ ನಿಮ್ಮೊಡನೆ ಒಯ್ಯಿರಿ

ಕೋರಿಕೆ

ಎದೆಯ ಕದವ ತೆರೆದು ಬಿಡು ಅಡಿಯ ಇಡುವೆ ಒಳಗೆ
ಹಚ್ಚಿಬಿಡುವೆ ಎದೆಯಗುಡಿಯಲೊಂದು ಒಲವ ದೀವಿಗೆ
ಕತ್ತಲೆಯ ಓಡಿಸಿ ಬೆಳಗುವೆ ನಾನಿನ್ನೆದೆಯನು
ಹೊಸಬೆಳಕು ಹರಿದು ಬರಲಿ ತೊಳೆದೆಲ್ಲ ಕೊಳೆಯನು

ಅನುರಾಗದ ಕಂಪನವೆ ನನ್ನ ಸೆಳೆದು ತಂದಿದೆ
ಕಳೆದು ಹೋದ ನನ್ನ ಹೃದಯವ ನಿನ್ನೆದೆಯಲಿ ಹುಡುಕಿದೆ
ನಿನ್ನ ಮನದ ತುಂಬೆಲ್ಲ ನಾನೇ ತುಂಬಿ ತುಳುಕಿಹೆ
ಬಚ್ಚಿಟ್ಟು ಬಯಕೆಗಳ ಸುಮ್ಮನೇಕೆ ಕುಳಿತಿಹೆ

ಎದೆಯ ತಾವು ಪೂರ ಬೇಡೋ ಆಸೆ ನನಗೆ ಇಲ್ಲ
ಮನದ ಮೂಲೆಯೊಂದು ಸಾಕು ನಾನಲ್ಲೆ ಇರುವೆನಲ್ಲ
ನಿನ್ನ ಪ್ರೀತಿಯೆಲ್ಲ ಪಡೆವ ನಾನೇ ಪರಮಪಾವನೆ
ಬಿಚ್ಚು ಮನದೆ ಮಾತಾಡು ಉಸುರಿ ಎಲ್ಲ ಭಾವನೆ

ನಿನ್ನ ಮಾತ ಝರಿಯಿಂದ ಭಾವ ಹರಿದು ಬರಲಿ
ಭಾವನೆಗಳ ಲಹರಿಯಲಿ ಪ್ರೀತಿ ಪುಟಿದು ಏಳಲಿ
ಭೋರ್ಗರೆವ ಒಲವಧಾರೆಯಲ್ಲಿ ನಾನು ತೇಲುವೆ
ನಿನ್ನ ಪ್ರೇಮ ಲೋಕದೆ ಈ ಜಗವನ್ನೆ ಮರೆಯುವೆ

Sunday, October 5, 2008

ನಾನೇನು ನಿನಗೆ?

ಅನುರಾಗ ಮಂದಿರದೆ ನಿನ್ನದೇ ಪ್ರತಿಮೆಯಿದೆ
ಮನದ ದೇಗುಲದಲ್ಲಿ ನೀ ದೇವನಾಗಿಹೆ
ಭಾವಗಳ ಲಹರಿಯಲಿ ನಿನ್ನದೇ ರಾಗವಿದೆ
ಹಾವಭಾವದಲೆಲ್ಲ ನಿನ್ನದೇ ಎರಕವಿದೆ

ಎಲ್ಲ ಯೋಚನೆಯಲ್ಲು ನೀನೇ ಸುಳಿದಾಡುತಿಹೆ
ಯೊಚನೆಯಲೆಲ್ಲವೂ ನೀ ತುಂಬಿಕೊಂಡಿಹೆ
ಸೂಚನೆಯೆ ಇಲ್ಲದೆ ಮನವ ಕದ್ದೊಯ್ದಿರುವೆ
ಯಾತನೆಯ ಸಹಿಸೆ ನಾ ನೀನೆದುರು ಬಾರದೆ

ಕಣ್ತುಂಬ ನಿನ್ನ ತುಂಬೋ ಆಸೆ ಈಡೇರಿಲ್ಲ
ನಿನ್ನ ಸಮ್ಮುಖದಿ ಮಾತುಗಳೇ ಬರುತಿಲ್ಲ
ನಿನ್ನ ಕಣ್ಣಲಿ ಕಣ್ಣು ಬೆರೆಸಿ ನೋಡುವ ಬಯಕೆ
ಸೋತು ಹೋಗುವೆನೆಂಬ ಶಂಕೆ ಮನದೊಳಗೆ

ಪ್ರೀತಿ ಹೋಲಿಕೆಯಲ್ಲಿ ನೀ ಮೇರು ಶಿಖರ
ಬಾಳ ಬಾಂದಳದಿ ನೀ ಹೊಳೆವ ಭಾಸ್ಕರ
ಸ್ವಲ್ಪವೇ ಬೆಳಕಕೊಡು ಮನದ ಕತ್ತಲೆ ನೀಗಿ
ಬರಡಾದ ಬದುಕಿನಲಿ ನೀನು ಬಾ ಹಸಿರಾಗಿ

ಎಷ್ಟೊಂದು ರೀತಿಯಲಿ ನಾ ಒಲವ ಬಿಂಬಿಸಿಹೆ
ನೀನೆಂದು ಹೇಳಿಲ್ಲ ನಿನ್ನ ಮನದನಿಸಿಕೆ
ಬದುಕನ್ನೆ ಅರ್ಪಿಸುವೆ ನಿನಗಾಗಿ ಪ್ರಿಯಸಖನೆ
ನಿನ್ನ ಬಾಳಲಿ ನಾನು ಏನೆಂದು ಹೇಳೊಮ್ಮೆ

ಕ್ಷಣಕ್ಷಣವು ಮನದೊಳಗೆ ನೀ ನನ್ನ ಕಾಡುತಿಹೆ
ಎಲ್ಲ ಪ್ರಶ್ನೆಯು ನೀನೆ ಉತ್ತರವ ನಾ ಕಾಣೆ
ನಿನ್ನದೇ ಕಣ್ಣಲ್ಲಿ ನಾ ಜಗವ ನೋಡುತಿಹೆ
ಮಣ್ಣಾದ ಮೇಲೆಯೂ ನಿನ್ನನ್ನೇ ಪ್ರೀತಿಸುವೆ

ಒಲವು ಮೂಡಿತೇನೋ

ಏನೋ ಹೇಳಿತದು ನನ್ನೀ ಹೃದಯ ನಿನ್ನ ನೋಡಿದಾಗ
ಪಿಸು ಮಾತನ್ನು ಕೇಳಲು ಹೊರಟೆ ದನಿಯೇ ಬರದೀಗ
ಏರುತಲಿರುವುದು ನನ್ನೆದೆ ಬಡಿತ ನೀನೆದುರಿರುವಾಗ
ಕಣ್ಣದು ನಾಚಿ ನೆಲ ನೋಡುವುದು ರೋಮಾಂಚನವೀಗ

ಎದೆ ಭೂಮಿಯಲಿ ಪ್ರೀತಿ ಬೀಜವು ಮೊಳೆತು ಬಿಟ್ಟಿತೇನೋ
ರಸ ಸಾಗರದಲಿ ಒಲವ ಕಮಲವು ಅರಳಿ ನಿಂತಿತೇನೋ
ಮುದ್ದು ಮನಸಿನ ಮುಗ್ಧ ಪ್ರೇಮಕೆ ನಾ ವಶವಾಗಿಹೆನು
ಮೃದುಲ ಭಾವವದು ಅಂಕೆಗೆ ಸಿಲುಕದೆ ನಾ ಶರಣಾಗಿಹೆನು

ಏನೂ ಅರಿಯದ ನನ್ನಯ ಮನದಲಿ ಆಸೆಯ ಭೋರ್ಗರೆತ
ನಲುಗಿ ಹೋದೆ ನಾ ತಡೆಯಲಾಗದೇ ಅಲೆಗಳ ಏರಿಳಿತ
ನವಭಾವಗಳು ತುಂಬಿ ಬಂದಿವೆ ಹೇಳಲು ಪದವಿಲ್ಲ
ನೂರು ರಾಗಗಳ ಒಮ್ಮೆಲೇ ಮೀಟಿದೆ ಹಾಡಲು ಕೊರಳಿಲ್ಲ

ನೀ ಸಿಕ್ಕರೆ ಸಾಕು ಭುವಿಯೇ ಸ್ವರ್ಗ ಬೇಡ ಇನ್ನೇನು
ನೀ ನಕ್ಕರೆ ಹೊಳೆವ ವಜ್ರದ ಹಾಗೆ ಬೇಡ ಆ ಹೊನ್ನು
ನಿನ್ನ ಅಪ್ಪುಗೆಯಲಿ ನಾ ಮೈಮರೆವೆ ಜಗದ ನೂರುಚಿಂತೆ
ಸಿಹಿ ಮುತ್ತೊಂದು ಕೊಟ್ಟರೆ ನೀನು ಸವಿ ಜೇನುಂಡಂತೆ

ನಿತ್ಯ ವಸಂತ ತರುವುದು ಧರೆಗೆ ನಮ್ಮೀ ಶುಭಮಿಲನ
ಎಲ್ಲೆಡೆಯಿಂದೂ ಕೇಳಿಬರುತಿದೆ ಕೋಗಿಲೆ ಕುಹುಗಾನ
ಮಳೆ ಬಿಸಿಲುಗಳು ಒಮ್ಮಲೇ ಬರಲು ಸುಂದರವೀ ಗಗನ
ಚೆಂದದ ಕಾಮನಬಿಲ್ಲನು ನೋಡಲು ಬೇಕೀ ಹವಾಮಾನ

ಜನುಮಾಂತರದ ಪರಿಚಯವೇನೋ ಎಂದಿದೆ ಒಳಮನಸು
ಏನೂ ಅರಿಯದ ಅಭಿನಯ ಮಾಡಿದೆ ನಿನ್ನಲೇಕೋ ಮುನಿಸು
ಕೋಟಿ ಜನುಮಕೂ ನೀ ಜೊತೆಯಾಗು ಜೀವನ ಯಾತ್ರೆಯಲಿ
ನಿನ್ನೊಡಗೂಡಿ ಅಡಿಯ ಇಡುವೆನು ಹೂಮುಳ್ಳೇನೇ ಇರಲಿ

ನೆನಪಿನ ಮಳೆಯಲಿ

ಎಲ್ಲಿಂದ ಸುರಿಯುತಿದೆ ಎಡೆಬಿಡದ ಜಲಧಾರೆ
ಬತ್ತಿದ ಎದೆಗಡಲು ತುಂಬಿ ಹರಿಯುವುದೇ
ಜಡಿ ಮಳೆಯು ನೆನಪುಗಳ ಎಳೆದೇಕೆ ತಂದಿದೆ
ಮಾಯದ ಆ ನೋವಿಗೆ ಬಾನು ಮರುಗಿದೆಯೇ

ಸುತ್ತೆಲ್ಲ ಕತ್ತಲೆಯ ಭೀಕರದ ಮೌನದಲಿ
ಧರಣಿಯ ದಾಹವನು ತಣಿಸುತಿದೆ ಹನಿಯಿಲ್ಲಿ
ಚಿಮ್ಮುತಿದೆ ಆಗಸದಿ ಪನ್ನೀರ ಸಿಂಚನವು
ಮನದ ಕಲ್ಮಶಗಳ ಎಂತು ತೊಳೆಯುವವೋ?

ಕರಗಿದ ಕರಿಮುಗಿಲು ಚೆಲ್ಲುತಿದೆ ಹನಿಗಳನು
ಭುವಿಯ ಒಡಲನು ಸೇರೆ ಎಲ್ಲೆಲ್ಲೂ ಹಸಿರು
ಕಡಲಿನ ಚಿಪ್ಪಿನಲಿ ಮುತ್ತಾಯ್ತು ಹನಿ ಕೆಲವು
ಬರಡಾದ ಎದೆ ನೆಲದೆ ಹಸಿರು ಮೂಡುವುದೆಂತೋ?

ಹಗಲೊಡನೆ ಹೋರಾಡಿ ಇರುಳಿಲ್ಲಿ ಮೆರೆಯುತಿದೆ
ನಿಶ್ಚಯದಿ ಭೋರಿಡುವ ಮಳೆಗೆಲ್ಲ ಒಂದೆ
ಮತ್ತೆ ನಿಶೆಯೊಡನೆ ಗೆಲುವು ಸಾಧಿಸೋ ಉಷೆ
ಬಾಳ ಕತ್ತಲೆ ನೀಗಿ ಬೆಳಕಿನ್ನು ಬರುವುದೇ

ಬೆಳಗುತಿದೆ ಕೋಲ್ಮಿಂಚು ಕತ್ತಲೆಯ ಬೇಧಿಸಿ
ಗುಡುಗಿನ ಸದ್ದದು ಕಿವಿಗೆ ಅಪ್ಪಳಿಸಿ
ಆಟವಾಡಿದೆ ಮಳೆಯು ನೆನಪುಗಳ ತೆರೆಸಿ
ಭ್ರಮೆಯ ಬದುಕಿನಲೂ ಆನಂದ ಇರಿಸಿ

ನೆನಪಿಗೂ ಮಳೆಹನಿಗೂ ಈ ಪರಿಯ ನಂಟೇಕೆ
ಪ್ರತಿಸಲವು ಮಳೆಯಲ್ಲೇ ಕಳೆದು ಹೋಗುವುದೇಕೆ
ಮನದ ಮನೆಯಂಗಳಕೆ ನೆನಪಿನ ಮಳೆಸುರಿದು
ತೊಳೆಯುವ ಬದಲಾಗಿ ರಾಡಿ ಎಬ್ಬಿಸಿತೇಕೆ?

ಕಳೆದ ಬಾಲ್ಯ

ಬಾಲ್ಯ ಕಳೆದೆಷ್ಟೋ ವರುಷಗಳು ಉರುಳಿತು
ಎಲ್ಲವೂ ನೆನಪಿನ ಮೂಟೆಯಲ್ಲುಳಿಯಿತು
ಎಲ್ಲವನು ಕಟ್ಟಿ ನಾ ಮೂಲೆಯಲ್ಲೆಸೆದಿರುವೆ
ಎಳೆ ಎಳೆಯಾಗಿ ಬಂದು ನೆನಪು ಕಾಡುತಲಿವೆ

ದಿನಗಳು ಸರಸರನೆ ಉರುಳಿದ ಕಾಲವದು
ಇರುವಿಕೆಯ ಅರಿವಿರದೆ ನಾಳೆಯ ಕನಸಿರದೆ
ತಪ್ಪು ಸರಿಗಳ ತಿಳುವಳಿಕೆಯಿರದೆ
ಮುಗ್ಧತೆಯೆ ಮೈತೆಳೆದು ಕಳೆದಂತ ದಿನಗಳವು

ಸಣ್ಣ ತಪ್ಪಿಗೂ ಪೆಟ್ಟು ತಿನ್ನುವ ಭಯ
ದೂರುಗಳಿಗೆಲ್ಲಕೂ ಅಪ್ಪನೇ ನ್ಯಾಯಾಲಯ
ದೂರು ಸಲ್ಲಿಸುವಲ್ಲಿ ಅಮ್ಮನೇ ಮೊದಲಿಗಳು
ಮುಂದೆ ಕಾದಿರುತಿತ್ತು ತರತರದ ಶಿಕ್ಷೆಗಳು

ಕದ್ದು ತಿನ್ನುವ ತಿಂಡಿ ತಿನಿಸಿನ ಸವಿಯು
ಸಿಕ್ಕಿ ಬಿದ್ದಾಗ ತಿಂದ ಏಟಿನ ನೋವು
ಎಲ್ಲೆಲ್ಲೋ ಬಿದ್ದಾದ ಮೊಣಕಾಲ ಗಾಯ
ಅಜ್ಜನ ಪ್ರೀತಿಯಲಿ ನೋವೆಲ್ಲವೂ ಮಾಯ

ತುಂಬಿದ ಮನೆಯೊಳಗೆ ಮನೆ ತುಂಬ ಮಕ್ಕಳು
ಎಲ್ಲರೂ ಬೆರೆಯುತಲಿ ಆಡಿದ ಆಟಗಳು
ಕಾರಣವೇ ಇಲ್ಲದೆ ಮಾಡಿದ ಜಗಳಗಳು
ಮರುಕ್ಷಣವೇ ಬೆಸೆದಿತ್ತು ಮತ್ತೆ ಸಂಬಂಧಗಳು

ಬಾಲ್ಯದ ನೆನಪಲ್ಲಿ ಮೊದಲು ಬರುವುದೇ ತಾತ
ಅವರದೇ ನೆರಳಲ್ಲಿ ನಾನೆಂದೂ ನಿಶ್ಚಿಂತ
ಕಣ್ಣೀರು ಒರೆಸಿರುವ ಪ್ರೀತಿಯ ಕೈಗಳು
ನೋವ ಮರೆಸುತಲಿತ್ತು ಆ ವೃದ್ಧ ಮಡಿಲು

ಕಾಲಚಕ್ರವು ತಿರುಗಿ ಬಾಲ್ಯ ಮುಗಿದಿತ್ತು
ಅಜ್ಜನಿಗೂ ಮೇಲಿಂದ ಕರೆಯೊಂದು ಬಂದಿತ್ತು
ಅವರ ನೆನಪಲೆಂದೂ ಕಣ್ತುಂಬಿ ಬರುವುದು
ಅವರ ಸ್ಥಾನವನು ಇನ್ಯಾರೂ ತುಂಬರು

ಅಂಥ ಚೇತನವು ಚಿರಾಯುವಾಗಿರಬೇಕು
ನೊಂದ ಮನಗಳನು ಹುರಿದುಂಬುತಿರಬೇಕು
ಮುಂದೆಂದೂ ಸಿಗದಂಥ ನಿಷ್ಕಪಟ ಪ್ರೀತಿ
ಬಯಸುವುದ ಕಸಿಯುವುದೇ ದೇವನಾ ನೀತಿ

ಮುದ್ದು ಕಂದ

ಅತ್ತುಬಿಡು ಓ ಕಂದ ಅಳುವಿಲ್ಲೇ ಮುಗಿಯಲಿ
ನಾಳೆಯ ಹಾದಿಯಲಿ ನಗುವೇ ತುಂಬಿರಲಿ
ನಿನ್ನ ಮನದಿಂಗಿತವ ಯಾರು ಬಲ್ಲವರಿಲ್ಲಿ?
ಅಳುವಿನ ಕಾರಣವ ನಾ ಎಂತು ತಿಳಿಯಲಿ?

ಕ್ಷಣಕೊಮ್ಮೆ ಅಳುತಿರುವೆ ಕ್ಷಣಕೊಮ್ಮೆ ನಗುವೆ
ದುಃಖದಾಚೆಗೆ ಸುಖವು ಎಂದು ಸಾರುತಲಿರುವೆ
ಅವರಿವರ ಕೈ ಮೇಲೆ ಆಡಿ ಬೆಳೆಯುತಲಿರುವೆ
ಎಲ್ಲರ ನಡುವಲೂ ನನ್ನ ಗುರುತಿಟ್ಟಿರುವೆ

ಕಣ್ಣಲ್ಲೇ ಕರೆದು ನೀ ಮುದ್ದಾಡು ಎನುತಿರುವೆ
ಎತ್ತಿಕೊಂಡರೆ ನನ್ನ ಜಡೆಯ ಹಿಡಿದೆಳೆಯುವೆ
ಕೆನ್ನೆಯ ಮುದ್ದಿಸುತ ಕುಂಕುಮವ ಅಳಿಸುವೆ
ಸರವ ಜಗ್ಗುತಲಿ ಮುಡಿದ ಹೂ ಕೀಳುವೆ

ನಿನ್ನ ಆಟಗಳೆಲ್ಲ ಹೆತ್ತ ಕರುಳಿಗೆ ಚೆಂದ
ಮುದ್ದಾಗಿ ಮಡಿಲಲ್ಲಿ ಮಲಗಿರುವ ಚಂದ್ರ
ಕಣ್ಣಲ್ಲಿ ಹೊಳೆಯುತಿದೆ ಮುಗ್ಧತೆಯ ಪ್ರತಿಬಿಂಬ
ಎಲ್ಲರೂ ಹೀಗಿರೆ ಈ ಜಗವೆಷ್ಟು ಅಂದ

ವಂಚನೆಯ ಒಂದೆಳೆಯು ಹುಡುಕಿದರೂ ಸಿಗದು
ಪುಟ್ಟ ತೆಲೆಯೊಳಗೆ ಯೋಚನೆಯು ಏನಿಹುದು?
ಎಲ್ಲಕೂ ಅಸ್ತ್ರವದು ಅಳುವೊಂದೇ ನಿನಗೆ

ಸಂತೈಸಿ ಸೋತಿಹೆನು ವೇಳೆಯಲ್ಲವು ನಿನಗೆ

ನೀನು ಜನಿಸಿದ ಮೇಲೆ ದಿನಚರಿಯೆ ಬದಲಾಯ್ತು
ಕೆಲಸ ಕಾರ್ಯಗಳೆಲ್ಲ ನೀನೆಣಿಸಿದಂತಾಯ್ತು
ಅರೆ ಗಳಿಗೆಯೂ ನನ್ನ ಬಿಡಲಾರೆ ಎನುತಿರುವೆ
ನನಗೆ ಬಿಡುವಾಗುವುದು ನೀ ಮಲಗಿದಾಗಲೇ

ಕಣ್ಣಿಗೆ ಹಬ್ಬ ನೀ ಅಂಬೆಗಾಲಿಡುವಾಗ
ಮನೆತುಂಬ ಬೆಳಕು ನೀ ಕಿಲಕಿಲನೆ ನಗುವಾಗ
ಮನೆ ಮನವ ಬೆಳಗುತಿಹ ನೀನೇ ನಂದಾದೀಪ
ನಿನ್ನಲ್ಲೇ ಕಾಣುವೆನು ಭಗವಂತನ ರೂಪ

ತೊದಲು ನುಡಿಗಳನೆಲ್ಲ ನಾ ತಿದ್ದಿ ಕಲಿಸುವೆ
ಎಡವಿ ಬೀಳಲು ನಿನ್ನ ಕೈ ಹಿಡಿದು ನಡೆಸುವೆ
ಏಳು ಬೀಳಿನಲೆಲ್ಲ ನಾ ಜೊತೆಯಿರುವೆ ಕಂದನೆ
ಬೆಳೆಯುತಿರು ನೀನೆಂದು ಹಾಗೆಯೇ ಸುಮ್ಮನೆ

ಮನವಿರಲಿ ಮಗುವಂತೆ ನೀನೆಷ್ಟು ಬೆಳೆದರೂ
ಬಾಂಧವ್ಯ ಬೆಸೆದಿರಲಿ ನೀನೆಲ್ಲೇ ಇದ್ದರೂ

ಮುಸ್ಸಂಜೆ

ಬಾಳ ಮುಸ್ಸಂಜೆಯಲಿ ನಾನು ನಿಂತಿರುವೆ
ಅರುಣೋದಯದ ಕನಸ ಕಾಣದಾಗಿರುವೆ
ನಿನ್ನೆಗಳ ಕಹಿ ನೆನಪು ನನ್ನೊಂದಿಗಿದೆ
ನಾ ಬಂದ ದಾರಿಯ ಹಿಂತಿರುಗಿ ನೋಡುತಿಹೆ

ನಾ ಬಂದೆ ಕಲ್ಲುಮುಳ್ಳುಗಳ ಹಾದಿಯಲಿ
ಎಡವಿರಬಹುದೇ ನಾನಿಟ್ಟ ಹೆಜ್ಜೆಯಲಿ
ಯೋಚಿಸಿದರೂ ನಾ ಹೇಳುವುದು ಯಾರಲ್ಲಿ?
ಒಂಟಿ ಪಯಣಿಗ ನಾನು ಬಾಳ ಪಥದಲ್ಲಿ

ಎಷ್ಟು ಕಷ್ಟಗಳ ದಾಟಿ ನನಗಿಂದು ಈ ಸ್ಥಿತಿ
ಸತಿಸುತರ ಕಳಕೊಂಡು ನನ್ನ ಬಾಳು ಈ ರೀತಿ
ಕಾಡು ಬಾ ಎಂದು ಕರೆಯುತಿದೆ ನನ್ನ
ಊರು ಹೋಗೆಂದು ಅಟ್ಟುತಿದೆ ಬೆನ್ನ

ತಿರುಗಿ ನೋಡದಿರೆನ್ನ ಓ ಪುಟ್ಟ ಮಗುವೆ
ನೋಡಿದರೆ ಬಾಲ್ಯದಲೆ ವಿರಾಗಿಯಾಗುವೆ
ನೀನಿನ್ನು ಬದುಕಲ್ಲಿ ಅಂಬೆಗಾಲಿಡುತಿರುವೆ
ರಾಶಿ ಅನುಭವಗಳು ನಿನಗಾಗಿ ಕಾದಿವೆ

ನೀ ನಡೆದುದು ಬಲು ಸ್ವಲ್ಪ ದಾರಿ
ಸಾಗಬೇಕಾದ ದಾರಿ ಇದೆ ದುಬಾರಿ
ಹೂವುಗಳೆ ಹಾಸಿರಲಿ ನೀ ನೋಯದಂತೆ
ಎಚ್ಚರದಿ ಹೆಜ್ಜೆಯಿಡು ಮನಃ ಸಾಕ್ಷಿಯಂತೆ