Sunday, October 5, 2008

ನೆನಪಿನ ಮಳೆಯಲಿ

ಎಲ್ಲಿಂದ ಸುರಿಯುತಿದೆ ಎಡೆಬಿಡದ ಜಲಧಾರೆ
ಬತ್ತಿದ ಎದೆಗಡಲು ತುಂಬಿ ಹರಿಯುವುದೇ
ಜಡಿ ಮಳೆಯು ನೆನಪುಗಳ ಎಳೆದೇಕೆ ತಂದಿದೆ
ಮಾಯದ ಆ ನೋವಿಗೆ ಬಾನು ಮರುಗಿದೆಯೇ

ಸುತ್ತೆಲ್ಲ ಕತ್ತಲೆಯ ಭೀಕರದ ಮೌನದಲಿ
ಧರಣಿಯ ದಾಹವನು ತಣಿಸುತಿದೆ ಹನಿಯಿಲ್ಲಿ
ಚಿಮ್ಮುತಿದೆ ಆಗಸದಿ ಪನ್ನೀರ ಸಿಂಚನವು
ಮನದ ಕಲ್ಮಶಗಳ ಎಂತು ತೊಳೆಯುವವೋ?

ಕರಗಿದ ಕರಿಮುಗಿಲು ಚೆಲ್ಲುತಿದೆ ಹನಿಗಳನು
ಭುವಿಯ ಒಡಲನು ಸೇರೆ ಎಲ್ಲೆಲ್ಲೂ ಹಸಿರು
ಕಡಲಿನ ಚಿಪ್ಪಿನಲಿ ಮುತ್ತಾಯ್ತು ಹನಿ ಕೆಲವು
ಬರಡಾದ ಎದೆ ನೆಲದೆ ಹಸಿರು ಮೂಡುವುದೆಂತೋ?

ಹಗಲೊಡನೆ ಹೋರಾಡಿ ಇರುಳಿಲ್ಲಿ ಮೆರೆಯುತಿದೆ
ನಿಶ್ಚಯದಿ ಭೋರಿಡುವ ಮಳೆಗೆಲ್ಲ ಒಂದೆ
ಮತ್ತೆ ನಿಶೆಯೊಡನೆ ಗೆಲುವು ಸಾಧಿಸೋ ಉಷೆ
ಬಾಳ ಕತ್ತಲೆ ನೀಗಿ ಬೆಳಕಿನ್ನು ಬರುವುದೇ

ಬೆಳಗುತಿದೆ ಕೋಲ್ಮಿಂಚು ಕತ್ತಲೆಯ ಬೇಧಿಸಿ
ಗುಡುಗಿನ ಸದ್ದದು ಕಿವಿಗೆ ಅಪ್ಪಳಿಸಿ
ಆಟವಾಡಿದೆ ಮಳೆಯು ನೆನಪುಗಳ ತೆರೆಸಿ
ಭ್ರಮೆಯ ಬದುಕಿನಲೂ ಆನಂದ ಇರಿಸಿ

ನೆನಪಿಗೂ ಮಳೆಹನಿಗೂ ಈ ಪರಿಯ ನಂಟೇಕೆ
ಪ್ರತಿಸಲವು ಮಳೆಯಲ್ಲೇ ಕಳೆದು ಹೋಗುವುದೇಕೆ
ಮನದ ಮನೆಯಂಗಳಕೆ ನೆನಪಿನ ಮಳೆಸುರಿದು
ತೊಳೆಯುವ ಬದಲಾಗಿ ರಾಡಿ ಎಬ್ಬಿಸಿತೇಕೆ?

No comments: