Saturday, December 20, 2008

ಮುದ್ದಿನ ಗೆಳತಿ

ನೀ ತೊರೆಸಿದೆ ನನ್ನಲ್ಲಿನ ತಬ್ಬಲಿಯ ಭಾವ
ಬೆಸೆದಿರುವೆ ನನ್ನ ಜೀವದಲಿ ನಿನ್ನ ಜೀವ
ಹಂಚಿಕೊಂಡಿಹೆ ನಿನ್ನಲ್ಲಿ ನನ್ನ ದುಃಖ ನೋವ
ನಾ ಮರೆಯೆ ನಿನ್ನ ಕೂಡೆ ನಕ್ಕ ಸಂತಸವ

ನನ್ನ ನಡವಳಿಕೆಯಲಿ ಪರಿವರ್ತನೆಯ ನೀ ತಂದೆ
ನನ್ನ ಬದುಕಿನ ಕನಸುಗಳಿಗೆ ಬಣ್ಣಗಳ ಲೇಪಿಸಿದೆ
ನನ್ನ ಬಾಳ ಬೆಳದಿಂಗಳ ಬಾನಿನಂಗಳದೆ
ಮರೆಯಬಾರದ ಮರೆಯಲಾರದ ಚುಕ್ಕಿ ನೀನಾದೆ

ಪ್ರೀತಿಯ ಸ್ನೇಹಕ್ಕೆ ನಿನ್ನಲಿ ನಿಜದರ್ಥ ಸಿಕ್ಕಿತು
ನಿನ್ನ ಸ್ನೇಹಪರ ನಡತೆಗೆ ನನ್ನ ಮನ ಸೋತಿತು
ನಿನ್ನ ಅಳು ಮೊಗವ ನೋಡೆ ನನ್ನ ಮನ ಮರುಗಿತು
ನಿನ್ನ ಸಂತಸದಲೆಂದೋ ನನ್ನ ಜೀವ ನಲಿಯಿತು

ಪುಟ್ಟ ಕಂಗಳಲೇನೋ ಅದು ಪ್ರೀತಿಯ ಧಾರೆ
ಆ ಕಂಗಳಲಿ ದ್ವೇಷವ ನಾ ಊಹಿಸಲಾರೆ
ಪ್ರೀತಿಯ ಸಾಗರ ನೀನಾಗೆ ನಾ ಪುಟ್ಟ ತೊರೆ
ನಿನ್ನ ಸೇರುವೆನೆಂಬ ನನಗೆ ಸಂತಸದ ಹೊರೆ

ನಾ ಬೇರೆ ನೀ ಬೇರೆ ಎಂಬ ಭಾವ ನನ್ನಲಿಲ್ಲ
ನಿನ್ನಲಿ ನನ್ನ ನನ್ನಲಿ ನಿನ್ನ ಕಂಡಿಹೆನಲ್ಲ
ನಿನ್ನದೇ ಪ್ರತಿಬಿಂಬ ನನ್ನ ಕಣ್ಣಿನಲೆಲ್ಲ
ನಮ್ಮ ಸ್ನೇಹದಲಿ ಹುಳುಕಿನ ಮಾತಿಲ್ಲ

ನನ್ನವನಿರಬೇಕು

ಕಣ್ಣ ಕುಡಿಯಂಚಿನಲಿ ಕಿರುನಗೆಯು ಮೂಡಲು
ನನ್ನವನ ನೆನಪೊಂದು ಸುಳಿದಾಡಬೇಕು
ವಾಸ್ತವವ ತೊರೆದು ನಾ ಮೈಮರೆತು ಕೂರಲು
ನನ್ನವನ ಕನಸೊಂದು ಕಾಡಬೇಕು

ಸಂಗೀತ ಸುಧೆಯಲ್ಲಿ ನಾ ತೇಲಿ ಹೋಗಲು
ನನ್ನವನ ಹಾಡೊಂದ ಕೇಳಬೇಕು
ಮನಬಿಚ್ಚಿ ಮನಸಾರೆ ಕಿಲಕಿಲನೆ ನಗಲು ನಾ
ನನ್ನವನ ಸರಸಗಳ ಸೊಲ್ಲು ಇರಬೇಕು

ಹೆಪ್ಪುಗಟ್ಟಿದ ನೋವು ಕರಗಿ ಕಂಬನಿ ಬರಲು
ಅವನ ಅನುರಾಗದ ಸಾಂತ್ವನವು ಬೇಕು
ಕೋಪವೆಲ್ಲವು ಕರಗಿ ನಾ ಮೆತ್ತಗಾಗಲು
ನನ್ನವನ ಕಣ್ಣಾಲಿ ತುಂಬಿ ಬರಬೇಕು

ನನ್ನ ಬಾನಿನ ಚಂದ್ರ ಚಂದ್ರಿಕೆಯ ಸುರಿಸಲು
ನನ್ನವನು ನಗೆಯೊಂದ ಸಾಲ ಕೊಡಬೇಕು
ಇರುಳಿನಲು ಹಾದಿಯದು ಚೆಂದದಲಿ ಕಾಣಲು
ಅವನ ಕಣ್ಣಿನ ಕಾಂತಿ ಹೊಮ್ಮುತಿರಬೇಕು

ನನ್ನ ಬಾಳ ಬಂಡಿಯದು ಕುಲುಕದೆ ಸಾಗಲು
ನನ್ನವನ ಸಾರಥ್ಯ ಜೊತೆ ನೀಡಬೇಕು
ನೀಲಿ ನಭದಲಿ ಎಲ್ಲೋ ಮಳೆಬಿಲ್ಲ ಕಾಣಲು
ನನ್ನವನ ಕುಂಚಗಳು ಬಣ್ಣ ಕೊಡಬೇಕು

ಸುಡುತಿರುವ ಬಿಸಿಲಿನಲು ನಾ ತಣ್ಣಗಿರಲು
ನನ್ನವನ ಸಾಂಗತ್ಯ ನೆರಳು ಕೊಡಬೇಕು
ಕೊರೆಯುತಿಹ ಚಳಿಯಲ್ಲು ನಾ ಬೆಚ್ಚಗಿರಲು
ಅವನ ಎದೆಗೂಡಲ್ಲಿ ಬಚ್ಚಿಕೊಳಬೇಕು


ಕೆನ್ನೆಯದು ಕೆಂಪಾಗಿ ನಾ ನಾಚಿಕೊಳ್ಳಲು
ಅವನು ನನ್ನಂದವನು ನೋಡುತಿರಬೇಕು
ಎಲ್ಲೆಲ್ಲೂ ನನ್ನವನೆ ನನ್ನಲ್ಲೂ ಅವನೇನೆ
ಅವನಿಲ್ಲದಿಹ ನಾಳೆ ನಾನೆಂದೂ ಕಾಣೆ

ಕಳೆದುಕೊಂಡೆನೇ ನಿನ್ನ?

ಕೊರಗಿರುವೆ ಅನುದಿನ ನಾನು ನಿನ್ನೊಲವ ಸವಿನೆನಪಲ್ಲಿ
ಬೆಂದಿರುವ ಬಯಕೆಗಳು ಚಿಗುರುತಿವೆ ಎದೆನೆಲದಲ್ಲಿ
ಹೂತಿಟ್ಟ ಕನಸುಗಳು ಕರೆಯುತಿವೆ ಕೈ ಬೀಸಿ
ಕೊಂಡೊಯ್ಯುದೆಲ್ಲಿಗೋ ಬಾಳ ಹಾದಿಯ ತೊರೆಸಿ

ಕ್ಷಮಿಸಿಬಿಡು ನನ್ನನು ನಿನ್ನೊಲವ ಅರಿಯದಾದೆ
ಸಿಕ್ಕಿಯೂ ದಕ್ಕದಿದು ವಿಧಿಬರಹ ಹಾಗಿದೆ
ಬದುಕೆಲ್ಲೋ ಒಲವಿನ್ನೆಲ್ಲೋ ಪರದಾಟ ನನ್ನದು
ಯಾರಲ್ಲಿ ಹೇಳಲಿ ಈ ನೋವು ಮುಗಿಯುವುದೆಂದು?

ಅಸ್ಪಷ್ಟ ಕಲ್ಪನೆಗೆ ನಿಜ ರೂಪ ನೀ ತಂದೆ
ಅರೆಬರೆಯ ಭಾವಗಳ ನೀ ಪೂರ್ಣಗೊಳಿಸಿದೆ
ಪ್ರೇಮದ ಮೊಳಕೆಯದು ಮರವಾಗಿ ನಿಂತಿದೆ
ಕಡಿಯದಿರು ನೀನೆಂದೂ ಆ ನೆರಳುಬೇಕಿದೆ

ಅರಿವಿಗೆ ಬರದಂತೆ ಬಲಿತುಹೋಗಿದೆ ಪ್ರೀತಿ
ತಿಳಿಯದಾಗಿದೆ ಅದನು ಕಾಯ್ದುಕೊಳ್ಳುವ ರೀತಿ
ಚಿಪ್ಪೊಳಡಗಿದ ಒಲವ ಹುಡುಕಿ ನೀ ತೆಗೆದಿರುವೆ
ಎಂದಿಗೂ ಸಲ್ಲದಿದು ಉಳಿಯುವುದು ಬರಿ ನೋವೇ!

ನಿನ್ನ ಯೋಚನೆಯಲ್ಲೆ ಆರಂಭ ನನ್ನ ದಿನ
ನಿನ್ನ ಮಾತಿನ ವಿನಃ ಜಗವೆಲ್ಲ ಬರಿ ಮೌನ
ಪುತ್ಥಳಿಯ ಪ್ರೇಮವನು ನನ್ನೆದೆಗೆ ನೀ ತಂದೆ
ಪ್ರತಿಯಾಗಿ ಕೊಡಲೇನು ನಾ ತಿಳಿಯದಾಗಿಹೆ

ಮರುಗದಿರು ನೀನೆಂದು ಮುಂದಿದೆ ಒಳ್ಳೆದಿನ
ಕಳೆದೆಲ್ಲ ನೋವುಗಳು ಸಿಗಲಿ ಸುಖ ಸೋಪಾನ
ದುಃಖಪಡುತಿರಲೆಂದೆ ನಾನಿರುವೆ ಭುವಿಯಲ್ಲಿ
ಜಗದೆಲ್ಲ ಸುಖಗಳು ನಿನ್ನ ಹುಡುಕುತ ಬರಲಿ

ನನ್ನೊಲವೇ

ಜೀವನ ಗಾನಕೆ ಪಲ್ಲವಿ ಬರೆದವಳೆ
ಬಾಳಿನ ಕಥೆಗೆ ಮುನ್ನುಡಿಯಾದವಳೆ
ಎಲ್ಲಿರುವೆ ಹೇಗಿರುವೆ ಬಾ ನೀ ನನ್ನೆದುರು
ಕಾದಿರುವೆ ಕೊರಗಿರುವೆ ನೀಡು ನೀ ಹೊಸ ಉಸಿರು

ಬೆಳ್ಳಿಯ ಮೋಡದ ಪಲ್ಲಕ್ಕಿಯಲಿ
ಕೂರಿಸಿ ನನ್ನ ತೂಗುತಲಿರುವೆ
ಬಳ್ಳಿಯು ಮರವನು ಹಬ್ಬುವ ಹಾಗೆ
ಸುತ್ತುತ ನನ್ನನೆ ಮರೆಮಾಚಿರುವೆ

ನಿನ್ನನುರಾಗದ ಅಮಲಿನಲಿ
ಲೋಕದ ಬಣ್ಣವ ಮಸುಕಾಗಿಸಿಹೆ
ಪ್ರೀತಿಯ ಮಾತಿನ ಕಳ್ಳ ನೋಟದಿ
ನನ್ನೆದೆಯನ್ನೇ ಆಳುತಿಹೆ

ಕಲ್ಲಂತಿದ್ದ ನನ್ನಯ ಮನವನು
ಕರಗಿಸಿ ನೀನು ನೀರಾಗಿಸಿಹೆ
ಹಾಲಾಹಲದ ಎದೆಗಡಲನು ಕಡೆದು
ಪ್ರೀತಿಯ ಸುಧೆಯ ನೀ ತಿನ್ನಿಸಿದೆ

ನಿನ್ನಯ ಪ್ರೇಮದ ಪಾವನ ಗಂಗೆಯ
ಹರಿಸುತ ನನ್ನ ಮುದಗೊಳಿಸಿರುವೆ
ಕಣ್ಣಲೆ ಗೀಚಿದ ಮುತ್ತಿನೋಲೆಯಲಿ
ಆನಂದ ಬಾಷ್ಪಗಳೆ ಹೊಳೆಯುತಿವೆ

Saturday, October 11, 2008

ಅಂತರಂಗ

ನಗುವ ಕಣ್ಣಿನಾಳದಲ್ಲಿ ನೂರೆಂಟು ನೋವಿದೆ
ನೋವ ಕಂಡು ಸಂತೈಸಲು ಹೃದಯವೊಂದು ಬೇಕಿದೆ
ನಗುಮೊಗದ ಮುಖವಾಡ ಹೊತ್ತು ಸಾಕಾಗಿದೆ
ಅಂತರಂಗ ತೆರೆದು ಮನವು ಹಗುರಾಗ ಬಯಸಿದೆ

ನೋವಿನಲ್ಲೂ ನಗುವ ಕಲೆಯು ಇನ್ನೂ ಯಾಕೆ ಬೇಕು
ತಾನೇ ಉರಿದು ಬೆಳಕಕೊಡುವ ಹಣತೆಗೆಲ್ಲಿ ಬದುಕು
ದುಃಖದಲ್ಲಿ ಪಾಲುಕೊಡಲು ಯಾಕೋ ಮನಸೇ ಇಲ್ಲ
ಸುಖದ ಪಾಲು ಕೇಳಲು ಎಲ್ಲ ಇರುವರಲ್ಲ

ಪ್ರೀತಿ ಬಯಸೋ ಮನಸಿಗೆ ಎಷ್ಟು ನೋವು ಕೊಟ್ಟರು?
ವರವ ಬಯಸಿ ಬಂದರೆ ಶ್ಯಾಪವ್ಯಾಕೆ ಇಟ್ಟರು?
ಬದುಕೆಂಬದು ಎಲ್ಲರಿಗೂ ದೈವ ಕೊಡುವ ಭಿಕ್ಷೆ
ಇನ್ನು ಕೆಲವು ಮನಸಿಗೆ ಯಾರೋ ಕೊಟ್ಟ ಶಿಕ್ಷೆ

ಬದುಕು ಸಾವು ಎರಡರಲ್ಲಿ ಏನಿಹುದು ಅಂತರ
ಸತ್ತು ಸತ್ತು ಬದುಕುವ ಕಾಯಕವು ನಿರಂತರ
ಸತ್ತೂ ಬದುಕಿ ಉಳಿದಿಹರು ಹಲವು ಪುಣ್ಯ ಪುರುಷರು
ಬದುಕಿಯೂ ಸತ್ತಿಹರು ಇಲ್ಲಿ ಕೆಲವು ದೀನರು

ಹೃದಯದಾಳದಲ್ಲಿ ಇರುವ ಬಯಕೆ ಯಾರು ಬಲ್ಲರು?
ಹುಡುಕೋ ನೆಪದೆ ಕಲ್ಲು ಹೊಡೆದು ತಿಳಿನೀರ ಕಲಕಿದರು
ನಾಟಕದ ನಡತೆಯಲ್ಲಿ ಬದುಕೇ ಕಳೆದು ಹೋಗಿದೆ
ಕಳೆದ ಗಳಿಗೆ ಬಾರದೆಂದು ಆಸೆ ಕಮರಿ ಹೋಗಿದೆ.

ಓ ಮನಸೇ

ಮನಸೇ ಓ ಮನಸೇ ನೀ ನನ್ನ ಮಾತು ಕೇಳು
ಓಡದಿರು ಎಲ್ಲೆಲ್ಲೋ ನಿನಗ್ಯಾಕೆ ಇಂಥ ಗೀಳು
ಬೇಲಿ ಹಾಕಲಾರೆ ನಿನಗೆ ನೀಡಬೇಡ ಗೋಳು
ಹದ್ದು ಮೀರಿ ಹೋದರೆ ನೀ ನನ್ನ ಬದುಕು ಹಾಳು

ನೆನಪ ಬುತ್ತಿ ಬಿಚ್ಚಬೇಡ ಕಹಿಯ ಪಾಲೇ ಹಿರಿದಿದೆ
ಮರೆವು ಒಂದು ವರವಾಗಿದೆ ಭವಿತವ್ಯದ ಒಳಿತಿಗೆ
ಕಹಿ ನೆನಪ ಕರೆತಂದರೆ ಜೊತೆಗೆ ಕಹಿಯು ಬರುತಿದೆ
ನಿನ್ನೆಗಳ ಗೊಡವೆ ಬೇಡ ಬರುವ ನಾಳೆ ಕಾದಿದೆ

ಯಾರ ಮನಸ ತಟ್ಟದಿರು ನೀ ಯಾರ ಹೃದಯ ಮುಟ್ಟದಿರು
ಯಾರೂ ನಿನ್ನ ಮುಟ್ಟದಂತೆ ನೀ ಇನ್ನು ಗಟ್ಟಿಯಾಗಿರು
ಸಾಂತ್ವನವ ನೀಡುತಿರು ನನ್ನೆಲ್ಲ ನೋವಿನಲ್ಲು
ಕೈ ಬಿಡದೆ ನಡೆಸು ನೀ ನನ್ನೆಲ್ಲ ಸೋಲಿನಲ್ಲು

ಆಯ್ಕೆಗಳು ನಿನಗಿರಲಿ ನಾ ನಿನ್ನೇ ನಂಬಿ ನಡೆವೆ
ದ್ವಂದ್ವಗಳ ತರಬೇಡ ಆಯ್ಕೆಗಳ ನಡುವೆ
ವಿಷಾದವೆಂದು ಬರದಿರಲಿ ಎಲ್ಲ ಮುಗಿದ ಮೇಲೆ
ಸನ್ಮಾರ್ಗದಿ ನಡೆಸೆನ್ನ ಭರವಸೆಯಿದೆ ನಿನ್ನ ಮೇಲೆ

ನೋವೆಲ್ಲ ಮರೆಸಿ ನೀ ನಲಿವುಗಳ ನೆನಪಿಡು
ದ್ವೇಷ ಹಟವನೆಲ್ಲ ಮರೆಸಿ ತಪ್ಪುಗಳ ಕ್ಷಮಿಸು
ವಿಕಾರವೆಲ್ಲ ತೊರೆದು ನೀ ಪ್ರೀತಿಯೊಂದೆ ಹಂಚು
ಜಗವನ್ನೇ ಗೆಲ್ಲುವ ವಿಶ್ವಾಸ ನನಗೆ ತುಂಬು

ನೆನಪಾಗೇ ಉಳಿದೆ

ನೀನೊಂದು ನೆನಪಾಗೇ ಉಳಿದೆ
ನನಸೆಂದುಕೊಂಡೆ ಕನಸಾಗಿ ಹೋದೆ
ನೀನೊಂದು ಕಥೆಯಾಗಿ ಬಂದೆ
ಬದುಕೆಂದುಕೊಂಡೆ ವ್ಯಥೆಯಾಗಿ ಹೋದೆ

ನಿನ್ನ ಕಂಡ ಆ ಕ್ಷಣವೆ ಹೃದಯ ಅರಳಿ ನಲಿದಿತ್ತು
ಕಣ್ಣುಗಳು ಕಲೆತಾಗ ಆಸೆಗಳು ಚಿಗುರಿತ್ತು
ನೀನೆದುರು ಬಂದಾಗ ನಾಲಿಗೆಯು ತೊದಲಿತ್ತು
ನೂರಾರು ಮಾತುಗಳು ಎದೆಯಲ್ಲೇ ಉಳಿದೋಯ್ತು

ನಿನ್ನ ಕಣ್ಣ ಶೋಧಿಸಿ ಕಾಮನೆಗಳ ಹುಡುಕಿದೆ
ತುಂಟ ನಗುವ ಬಿಟ್ಟು ಬೇರೇನು ಕಾಣದಾದೆ
ಚಡಪಡಿಸಿದೆ ಅಂದು ನಾ ಬಯಕೆ ಹೇಳಲಾರದೆ
ಗೊತ್ತಿದ್ದೂ ನಟಿಸಿದೆ ನೀ ನನ್ನ ಒಲವ ಒಪ್ಪದೇ

ಸ್ನೇಹದ ಬೇಲಿ ದಾಟಿ ಪ್ರೀತಿ ಹೂವು ಅರಳಿತ್ತು
ಜೊತೆಯಾಗಿ ಬಾಳಲು ಮೂರು ಗಂಟು ಬೇಕಿತ್ತು
ನಿನ್ನೊಲವಿನ ಕುಸುಮ ಯಾರೆದೆಯಲಿ ಅರಳಿತೋ?
ಯಾರ ಪ್ರೀತಿಗಾಗಿ ಅಂದು ನಿನ್ನ ಮನವು ಬಯಸಿತೋ?

ಮರೆತು ಕೂಡ ಮರೆಯೆ ನಾ ನಿನ್ನಯ ಸವಿನೆನಪು
ಎಲ್ಲೇ ಇರು ಹೇಗೇ ಇರು ಸಂತೋಷದಿ ಬದುಕು
ನಿನ್ನ ಕೈಯ ಹಿಡಿದ ಆ ಜೀವವದು ಧನ್ಯ
ಮನಸು ಮನಸು ಬೆರೆತರೇನೇ ಬಾಳೆಂದೂ ಮಾನ್ಯ

ಬದುಕೇ ನೀ ಕಾಡಬೇಡ

ಬದುಕೇ ನನಗೆ ನಿನ್ನ ಮೇಲೆ ಯಾವ ದೂರು ಇಲ್ಲ
ನೀ ಕೇಳೋ ಪ್ರಶ್ನೆಗಳಿಗೆ ಉತ್ತರವೇ ಸಿಗುತಿಲ್ಲ
ನೀನೇ ಒಂದು ಪ್ರಶ್ನೆಯಾಗಿ ನನ್ನ ಮುಂದೆ ನಿಂತಿಹೆ
ಉತ್ತರವ ಹುಡುಕಿ ಹುಡುಕಿ ನಿನ್ನೆದುರು ಸೋತಿಹೆ

ಯಾವ ಯಾವ ತಿರುವುಗಳಿಗೆ ನನ್ನ ಎಳೆಯುತಿರುವೆ
ಬದಲಾವಣೆಗಳ ಒಪ್ಪಲು ಸಮಯ ಬೇಕು ತಿಳಿಯದೇ?
ಬದುಕಲ್ಲಿ ತಿರುವುಗಳು ತುಂಬ ಸಹಜ ತಿಳಿದಿದೆ
ತಿರುವುಗಳೇ ಬದುಕಾದರೆ ಬಾಳ ಪಯಣ ಸಾಧ್ಯವೇ?

ಧನಕನಕ ಬೇಡುತಿಲ್ಲ ನೀಡು ನನಗೆ ಶಾಂತಿಯ
ಕೋಲಾಹಲ ಎಬ್ಬಿಸದೆ ಮರೆಸಿಬಿಡು ಕ್ರಾಂತಿಯ
ಒಂಟಿಯಾಗಿ ನಿನ್ನೆದುರಿಸೋ ಗುಂಡಿಗೆ ನನಗಿಲ್ಲ
ನಂಟುಗಳೇ ಗಂಟಾಗಿವೆ ಬಿಡಿಸಲಾಗುತಿಲ್ಲ

ನಾ ಇದ್ದು ಕೂಡ ಇರಲಾರೆ ಈ ನಿನ್ನ ಆಟದಲ್ಲಿ
ನಟಿಸಿ ಕೂಡ ನಟಿಸಲಾರೆ ಈ ನಿನ್ನ ನಾಟಕದಲ್ಲಿ
ಪಾತ್ರಕೊಂದು ಜೀವ ತುಂಬೋ ಯತ್ನ ಇಲ್ಲಿ ನಡೆಸಿಹೆ
ಕೊನೆಕ್ಷಣಗಳವರೆಗೂ ನಟನೆ ಮುಂದುವರೆಸುವೆ

ಹತಾಶೆ ಎಲ್ಲ ಮರೆತು ನಾ ನಿನ್ನ ಒಪ್ಪಿಕೊಂಡಿಹೆ
ನೀ ಬಂದ ಹಾಗೆ ಸ್ವೀಕರಿಸುವ ಪ್ರಯತ್ನವ ನಡೆಸಿಹೆ
ಅತಿಯಾಗಿ ನೀನು ಕಾಡಬೇಡ ಉತ್ಸಾಹ ಕುಂದಬಹುದು
ನೀನೇ ಬೇಡವಾಗಿ ಸಾವಿಗೆ ಮುಖಮಾಡಬಹುದು

ತಪ್ಪಿದ ದಾರಿ

ಎಲ್ಲಿ ತಪ್ಪಿತು ಈ ಬದುಕಿನ ದಾರಿ?
ಹೇಗೆ ತಲುಪಲಿ ಕನಸಿನ ಆ ಗುರಿ?
ಮುಂದಿನ ಹಾದಿಯ ನೆನೆದರೆ ಗಾಬರಿ
ತಳಮಳವೇಕೆ ಕಾಡಿದೆ ಈ ಪರಿ?

ಸಮಯದ ಆಟವೋ ವಿಧಿಯ ಕಾಟವೋ
ಕೈ ಜಾರಿ ಹೋಗಿದೆ ಆ ಕನಸು
ತಪ್ಪಿದ ತಾಳಕೂ ಒಪ್ಪದ ಮೇಳಕೂ
ನಡೆಯಲೇ ಬೇಕು ಇದೇ ನನಸು

ನೆನೆಯುವುದೊಂದು ನಡೆಯುವುದೊಂದು
ಎಲ್ಲರ ಬದುಕಲು ಹೀಗೇನಾ?
ಕಾಣದ ಕೈಯದು ಸೂತ್ರವ ಹಿಡಿದಿದೆ
ಜಯಿಸುವ ಪರಿಯ ಕಾಣೆನು ನಾ

ಕನಸಿನ ಮೂಟೆಯೆ ಮನದೊಳಗಿತ್ತು
ಎಲ್ಲವು ಈಗ ಧೂಳಿಪಟ
ಬೆಂದಿಹ ಮನದಲಿ ಗುರಿಗಳೇ ಇಲ್ಲ
ಸೂತ್ರ ಹರಿದಿಹ ಗಾಳಿಪಟ

ಯಾರ ಶಾಪವೋ ಯಾರ ಪಾಪವೋ
ಸೋಕಿತು ನನ್ನೀ ಬದುಕನ್ನು?
ಒಲ್ಲದ ಒಲವಿನ ಬಾಳ ನೌಕೆಯ
ನಡೆಸುವ ಪರಿಯು ಹೇಗಿನ್ನು?

ದಿಕ್ಕು ತಪ್ಪಿತೋ ಹೆಜ್ಜೆ ಎಡವಿತೋ
ಕಲ್ಲುಮುಳ್ಳುಗಳೇ ಇವೆ ಇಲ್ಲಿ
ತಿಳಿವುದರೊಳಗೇ ಸಾಗಿಹೆ ದೂರ
ಹಿಂತಿರುಗಿ ಬಾರದಾ ರೀತಿಯಲಿ

ಬೆಳ್ಳಿಮೋಡಗಳೆ

ನೀಲಿ ಬಾನಿನ ಬೆಳ್ಳಿಮೋಡಗಳೆ ಓಡುತಿರುವಿರಿ ಎಲ್ಲಿಗೆ?
ಯಾವ ಗಾಳಿಯು ಬೀಸಿ ತಂದಿದೆ ನಿಮ್ಮನಿಲ್ಲಿಯವರೆಗೆ?
ಆದಿ ತಿಳಿಯದ ಅಂತ್ಯ ಕಾಣದ ನಿಮ್ಮ ಪಯಣ ಎಲ್ಲಿಗೆ?
ಯಾವ ಪ್ರೇಮಿಯು ಇತ್ತ ಸುದ್ದಿಯ ಒಯ್ಯತಿರುವಿರಿ ಯಾರಿಗೆ?

ರವಿಯ ವರವೋ ಶಶಿಯ ಕೊಡುಗೆಯೋ ಎಲ್ಲಿಂದ ಬಂತು ಈ ಬಣ್ಣ?
ಬಾನಿನಂಗಳದೆ ಜೂಟಾಟವಾಡಿ ತಣಿಸಿ ನೋಡುಗರ ಕಣ್ಣ
ಒಮ್ಮೆ ಈ ತರ ಇನ್ನೊಮ್ಮೆ ಆ ತರ, ತರತರದ ನಿಮ್ಮ ಆಕಾರ
ಮಂದ ಮಾರುತ ಬೀಸಿ ಬರೆದಿದೆ ನಿಮ್ಮ ಚದುರಿಸಿ ಚಿತ್ತಾರ

ಸಂಜೆ ಸೂರ್ಯನ ಕೆಂಪು ಕಿರಣವು ನಿಮಗೆ ಬಣ್ಣವ ಹಚ್ಚಿದೆ
ರಂಗುರಂಗಿನ ರಂಗೋಲಿಯಾಗಿ ನಿಮ್ಮ ಅಂದವು ಹೆಚ್ಚಿದೆ
ಹುಣ್ಣಿಮೆಯ ಇರುಳ ಹಾಲ ಬೆಳದಿಂಗಳಿಗಾಗಿ ಕಾಯುವಿರಾ ನೀವು?
ಮಿನುಗೋ ತಾರೆಗಳ ಮೈಯ ಸವರಿ ಚೆಲ್ಲಾಟವಾಡುವಿರೇನು?

ಚಂದ್ರ ನಾಚಿ ಮರೆಯಾಗಿ ಹೋಗುವ ನಿಮ್ಮ ಅಂದ ಹೆಚ್ಚಿದಾಗ
ಹೊಳೆವ ತಾರೆಗಳೆ ಸುಮ್ಮನಿರುವುದು ನಿಮ್ಮ ಚಂದ ನೋಡಿದಾಗ
ಕಡಲ ಮಕ್ಕಳೆ ಏನಿಷ್ಟು ಅವಸರ ನಾನು ಬರುವೆನು ನಿಲ್ಲಿರಿ
ನಿಮ್ಮನೇರಿ ಜಗವೆಲ್ಲ ನೋಡುವೆನು ನನ್ನ ನಿಮ್ಮೊಡನೆ ಒಯ್ಯಿರಿ

ಕೋರಿಕೆ

ಎದೆಯ ಕದವ ತೆರೆದು ಬಿಡು ಅಡಿಯ ಇಡುವೆ ಒಳಗೆ
ಹಚ್ಚಿಬಿಡುವೆ ಎದೆಯಗುಡಿಯಲೊಂದು ಒಲವ ದೀವಿಗೆ
ಕತ್ತಲೆಯ ಓಡಿಸಿ ಬೆಳಗುವೆ ನಾನಿನ್ನೆದೆಯನು
ಹೊಸಬೆಳಕು ಹರಿದು ಬರಲಿ ತೊಳೆದೆಲ್ಲ ಕೊಳೆಯನು

ಅನುರಾಗದ ಕಂಪನವೆ ನನ್ನ ಸೆಳೆದು ತಂದಿದೆ
ಕಳೆದು ಹೋದ ನನ್ನ ಹೃದಯವ ನಿನ್ನೆದೆಯಲಿ ಹುಡುಕಿದೆ
ನಿನ್ನ ಮನದ ತುಂಬೆಲ್ಲ ನಾನೇ ತುಂಬಿ ತುಳುಕಿಹೆ
ಬಚ್ಚಿಟ್ಟು ಬಯಕೆಗಳ ಸುಮ್ಮನೇಕೆ ಕುಳಿತಿಹೆ

ಎದೆಯ ತಾವು ಪೂರ ಬೇಡೋ ಆಸೆ ನನಗೆ ಇಲ್ಲ
ಮನದ ಮೂಲೆಯೊಂದು ಸಾಕು ನಾನಲ್ಲೆ ಇರುವೆನಲ್ಲ
ನಿನ್ನ ಪ್ರೀತಿಯೆಲ್ಲ ಪಡೆವ ನಾನೇ ಪರಮಪಾವನೆ
ಬಿಚ್ಚು ಮನದೆ ಮಾತಾಡು ಉಸುರಿ ಎಲ್ಲ ಭಾವನೆ

ನಿನ್ನ ಮಾತ ಝರಿಯಿಂದ ಭಾವ ಹರಿದು ಬರಲಿ
ಭಾವನೆಗಳ ಲಹರಿಯಲಿ ಪ್ರೀತಿ ಪುಟಿದು ಏಳಲಿ
ಭೋರ್ಗರೆವ ಒಲವಧಾರೆಯಲ್ಲಿ ನಾನು ತೇಲುವೆ
ನಿನ್ನ ಪ್ರೇಮ ಲೋಕದೆ ಈ ಜಗವನ್ನೆ ಮರೆಯುವೆ

Sunday, October 5, 2008

ನಾನೇನು ನಿನಗೆ?

ಅನುರಾಗ ಮಂದಿರದೆ ನಿನ್ನದೇ ಪ್ರತಿಮೆಯಿದೆ
ಮನದ ದೇಗುಲದಲ್ಲಿ ನೀ ದೇವನಾಗಿಹೆ
ಭಾವಗಳ ಲಹರಿಯಲಿ ನಿನ್ನದೇ ರಾಗವಿದೆ
ಹಾವಭಾವದಲೆಲ್ಲ ನಿನ್ನದೇ ಎರಕವಿದೆ

ಎಲ್ಲ ಯೋಚನೆಯಲ್ಲು ನೀನೇ ಸುಳಿದಾಡುತಿಹೆ
ಯೊಚನೆಯಲೆಲ್ಲವೂ ನೀ ತುಂಬಿಕೊಂಡಿಹೆ
ಸೂಚನೆಯೆ ಇಲ್ಲದೆ ಮನವ ಕದ್ದೊಯ್ದಿರುವೆ
ಯಾತನೆಯ ಸಹಿಸೆ ನಾ ನೀನೆದುರು ಬಾರದೆ

ಕಣ್ತುಂಬ ನಿನ್ನ ತುಂಬೋ ಆಸೆ ಈಡೇರಿಲ್ಲ
ನಿನ್ನ ಸಮ್ಮುಖದಿ ಮಾತುಗಳೇ ಬರುತಿಲ್ಲ
ನಿನ್ನ ಕಣ್ಣಲಿ ಕಣ್ಣು ಬೆರೆಸಿ ನೋಡುವ ಬಯಕೆ
ಸೋತು ಹೋಗುವೆನೆಂಬ ಶಂಕೆ ಮನದೊಳಗೆ

ಪ್ರೀತಿ ಹೋಲಿಕೆಯಲ್ಲಿ ನೀ ಮೇರು ಶಿಖರ
ಬಾಳ ಬಾಂದಳದಿ ನೀ ಹೊಳೆವ ಭಾಸ್ಕರ
ಸ್ವಲ್ಪವೇ ಬೆಳಕಕೊಡು ಮನದ ಕತ್ತಲೆ ನೀಗಿ
ಬರಡಾದ ಬದುಕಿನಲಿ ನೀನು ಬಾ ಹಸಿರಾಗಿ

ಎಷ್ಟೊಂದು ರೀತಿಯಲಿ ನಾ ಒಲವ ಬಿಂಬಿಸಿಹೆ
ನೀನೆಂದು ಹೇಳಿಲ್ಲ ನಿನ್ನ ಮನದನಿಸಿಕೆ
ಬದುಕನ್ನೆ ಅರ್ಪಿಸುವೆ ನಿನಗಾಗಿ ಪ್ರಿಯಸಖನೆ
ನಿನ್ನ ಬಾಳಲಿ ನಾನು ಏನೆಂದು ಹೇಳೊಮ್ಮೆ

ಕ್ಷಣಕ್ಷಣವು ಮನದೊಳಗೆ ನೀ ನನ್ನ ಕಾಡುತಿಹೆ
ಎಲ್ಲ ಪ್ರಶ್ನೆಯು ನೀನೆ ಉತ್ತರವ ನಾ ಕಾಣೆ
ನಿನ್ನದೇ ಕಣ್ಣಲ್ಲಿ ನಾ ಜಗವ ನೋಡುತಿಹೆ
ಮಣ್ಣಾದ ಮೇಲೆಯೂ ನಿನ್ನನ್ನೇ ಪ್ರೀತಿಸುವೆ

ಒಲವು ಮೂಡಿತೇನೋ

ಏನೋ ಹೇಳಿತದು ನನ್ನೀ ಹೃದಯ ನಿನ್ನ ನೋಡಿದಾಗ
ಪಿಸು ಮಾತನ್ನು ಕೇಳಲು ಹೊರಟೆ ದನಿಯೇ ಬರದೀಗ
ಏರುತಲಿರುವುದು ನನ್ನೆದೆ ಬಡಿತ ನೀನೆದುರಿರುವಾಗ
ಕಣ್ಣದು ನಾಚಿ ನೆಲ ನೋಡುವುದು ರೋಮಾಂಚನವೀಗ

ಎದೆ ಭೂಮಿಯಲಿ ಪ್ರೀತಿ ಬೀಜವು ಮೊಳೆತು ಬಿಟ್ಟಿತೇನೋ
ರಸ ಸಾಗರದಲಿ ಒಲವ ಕಮಲವು ಅರಳಿ ನಿಂತಿತೇನೋ
ಮುದ್ದು ಮನಸಿನ ಮುಗ್ಧ ಪ್ರೇಮಕೆ ನಾ ವಶವಾಗಿಹೆನು
ಮೃದುಲ ಭಾವವದು ಅಂಕೆಗೆ ಸಿಲುಕದೆ ನಾ ಶರಣಾಗಿಹೆನು

ಏನೂ ಅರಿಯದ ನನ್ನಯ ಮನದಲಿ ಆಸೆಯ ಭೋರ್ಗರೆತ
ನಲುಗಿ ಹೋದೆ ನಾ ತಡೆಯಲಾಗದೇ ಅಲೆಗಳ ಏರಿಳಿತ
ನವಭಾವಗಳು ತುಂಬಿ ಬಂದಿವೆ ಹೇಳಲು ಪದವಿಲ್ಲ
ನೂರು ರಾಗಗಳ ಒಮ್ಮೆಲೇ ಮೀಟಿದೆ ಹಾಡಲು ಕೊರಳಿಲ್ಲ

ನೀ ಸಿಕ್ಕರೆ ಸಾಕು ಭುವಿಯೇ ಸ್ವರ್ಗ ಬೇಡ ಇನ್ನೇನು
ನೀ ನಕ್ಕರೆ ಹೊಳೆವ ವಜ್ರದ ಹಾಗೆ ಬೇಡ ಆ ಹೊನ್ನು
ನಿನ್ನ ಅಪ್ಪುಗೆಯಲಿ ನಾ ಮೈಮರೆವೆ ಜಗದ ನೂರುಚಿಂತೆ
ಸಿಹಿ ಮುತ್ತೊಂದು ಕೊಟ್ಟರೆ ನೀನು ಸವಿ ಜೇನುಂಡಂತೆ

ನಿತ್ಯ ವಸಂತ ತರುವುದು ಧರೆಗೆ ನಮ್ಮೀ ಶುಭಮಿಲನ
ಎಲ್ಲೆಡೆಯಿಂದೂ ಕೇಳಿಬರುತಿದೆ ಕೋಗಿಲೆ ಕುಹುಗಾನ
ಮಳೆ ಬಿಸಿಲುಗಳು ಒಮ್ಮಲೇ ಬರಲು ಸುಂದರವೀ ಗಗನ
ಚೆಂದದ ಕಾಮನಬಿಲ್ಲನು ನೋಡಲು ಬೇಕೀ ಹವಾಮಾನ

ಜನುಮಾಂತರದ ಪರಿಚಯವೇನೋ ಎಂದಿದೆ ಒಳಮನಸು
ಏನೂ ಅರಿಯದ ಅಭಿನಯ ಮಾಡಿದೆ ನಿನ್ನಲೇಕೋ ಮುನಿಸು
ಕೋಟಿ ಜನುಮಕೂ ನೀ ಜೊತೆಯಾಗು ಜೀವನ ಯಾತ್ರೆಯಲಿ
ನಿನ್ನೊಡಗೂಡಿ ಅಡಿಯ ಇಡುವೆನು ಹೂಮುಳ್ಳೇನೇ ಇರಲಿ

ನೆನಪಿನ ಮಳೆಯಲಿ

ಎಲ್ಲಿಂದ ಸುರಿಯುತಿದೆ ಎಡೆಬಿಡದ ಜಲಧಾರೆ
ಬತ್ತಿದ ಎದೆಗಡಲು ತುಂಬಿ ಹರಿಯುವುದೇ
ಜಡಿ ಮಳೆಯು ನೆನಪುಗಳ ಎಳೆದೇಕೆ ತಂದಿದೆ
ಮಾಯದ ಆ ನೋವಿಗೆ ಬಾನು ಮರುಗಿದೆಯೇ

ಸುತ್ತೆಲ್ಲ ಕತ್ತಲೆಯ ಭೀಕರದ ಮೌನದಲಿ
ಧರಣಿಯ ದಾಹವನು ತಣಿಸುತಿದೆ ಹನಿಯಿಲ್ಲಿ
ಚಿಮ್ಮುತಿದೆ ಆಗಸದಿ ಪನ್ನೀರ ಸಿಂಚನವು
ಮನದ ಕಲ್ಮಶಗಳ ಎಂತು ತೊಳೆಯುವವೋ?

ಕರಗಿದ ಕರಿಮುಗಿಲು ಚೆಲ್ಲುತಿದೆ ಹನಿಗಳನು
ಭುವಿಯ ಒಡಲನು ಸೇರೆ ಎಲ್ಲೆಲ್ಲೂ ಹಸಿರು
ಕಡಲಿನ ಚಿಪ್ಪಿನಲಿ ಮುತ್ತಾಯ್ತು ಹನಿ ಕೆಲವು
ಬರಡಾದ ಎದೆ ನೆಲದೆ ಹಸಿರು ಮೂಡುವುದೆಂತೋ?

ಹಗಲೊಡನೆ ಹೋರಾಡಿ ಇರುಳಿಲ್ಲಿ ಮೆರೆಯುತಿದೆ
ನಿಶ್ಚಯದಿ ಭೋರಿಡುವ ಮಳೆಗೆಲ್ಲ ಒಂದೆ
ಮತ್ತೆ ನಿಶೆಯೊಡನೆ ಗೆಲುವು ಸಾಧಿಸೋ ಉಷೆ
ಬಾಳ ಕತ್ತಲೆ ನೀಗಿ ಬೆಳಕಿನ್ನು ಬರುವುದೇ

ಬೆಳಗುತಿದೆ ಕೋಲ್ಮಿಂಚು ಕತ್ತಲೆಯ ಬೇಧಿಸಿ
ಗುಡುಗಿನ ಸದ್ದದು ಕಿವಿಗೆ ಅಪ್ಪಳಿಸಿ
ಆಟವಾಡಿದೆ ಮಳೆಯು ನೆನಪುಗಳ ತೆರೆಸಿ
ಭ್ರಮೆಯ ಬದುಕಿನಲೂ ಆನಂದ ಇರಿಸಿ

ನೆನಪಿಗೂ ಮಳೆಹನಿಗೂ ಈ ಪರಿಯ ನಂಟೇಕೆ
ಪ್ರತಿಸಲವು ಮಳೆಯಲ್ಲೇ ಕಳೆದು ಹೋಗುವುದೇಕೆ
ಮನದ ಮನೆಯಂಗಳಕೆ ನೆನಪಿನ ಮಳೆಸುರಿದು
ತೊಳೆಯುವ ಬದಲಾಗಿ ರಾಡಿ ಎಬ್ಬಿಸಿತೇಕೆ?

ಕಳೆದ ಬಾಲ್ಯ

ಬಾಲ್ಯ ಕಳೆದೆಷ್ಟೋ ವರುಷಗಳು ಉರುಳಿತು
ಎಲ್ಲವೂ ನೆನಪಿನ ಮೂಟೆಯಲ್ಲುಳಿಯಿತು
ಎಲ್ಲವನು ಕಟ್ಟಿ ನಾ ಮೂಲೆಯಲ್ಲೆಸೆದಿರುವೆ
ಎಳೆ ಎಳೆಯಾಗಿ ಬಂದು ನೆನಪು ಕಾಡುತಲಿವೆ

ದಿನಗಳು ಸರಸರನೆ ಉರುಳಿದ ಕಾಲವದು
ಇರುವಿಕೆಯ ಅರಿವಿರದೆ ನಾಳೆಯ ಕನಸಿರದೆ
ತಪ್ಪು ಸರಿಗಳ ತಿಳುವಳಿಕೆಯಿರದೆ
ಮುಗ್ಧತೆಯೆ ಮೈತೆಳೆದು ಕಳೆದಂತ ದಿನಗಳವು

ಸಣ್ಣ ತಪ್ಪಿಗೂ ಪೆಟ್ಟು ತಿನ್ನುವ ಭಯ
ದೂರುಗಳಿಗೆಲ್ಲಕೂ ಅಪ್ಪನೇ ನ್ಯಾಯಾಲಯ
ದೂರು ಸಲ್ಲಿಸುವಲ್ಲಿ ಅಮ್ಮನೇ ಮೊದಲಿಗಳು
ಮುಂದೆ ಕಾದಿರುತಿತ್ತು ತರತರದ ಶಿಕ್ಷೆಗಳು

ಕದ್ದು ತಿನ್ನುವ ತಿಂಡಿ ತಿನಿಸಿನ ಸವಿಯು
ಸಿಕ್ಕಿ ಬಿದ್ದಾಗ ತಿಂದ ಏಟಿನ ನೋವು
ಎಲ್ಲೆಲ್ಲೋ ಬಿದ್ದಾದ ಮೊಣಕಾಲ ಗಾಯ
ಅಜ್ಜನ ಪ್ರೀತಿಯಲಿ ನೋವೆಲ್ಲವೂ ಮಾಯ

ತುಂಬಿದ ಮನೆಯೊಳಗೆ ಮನೆ ತುಂಬ ಮಕ್ಕಳು
ಎಲ್ಲರೂ ಬೆರೆಯುತಲಿ ಆಡಿದ ಆಟಗಳು
ಕಾರಣವೇ ಇಲ್ಲದೆ ಮಾಡಿದ ಜಗಳಗಳು
ಮರುಕ್ಷಣವೇ ಬೆಸೆದಿತ್ತು ಮತ್ತೆ ಸಂಬಂಧಗಳು

ಬಾಲ್ಯದ ನೆನಪಲ್ಲಿ ಮೊದಲು ಬರುವುದೇ ತಾತ
ಅವರದೇ ನೆರಳಲ್ಲಿ ನಾನೆಂದೂ ನಿಶ್ಚಿಂತ
ಕಣ್ಣೀರು ಒರೆಸಿರುವ ಪ್ರೀತಿಯ ಕೈಗಳು
ನೋವ ಮರೆಸುತಲಿತ್ತು ಆ ವೃದ್ಧ ಮಡಿಲು

ಕಾಲಚಕ್ರವು ತಿರುಗಿ ಬಾಲ್ಯ ಮುಗಿದಿತ್ತು
ಅಜ್ಜನಿಗೂ ಮೇಲಿಂದ ಕರೆಯೊಂದು ಬಂದಿತ್ತು
ಅವರ ನೆನಪಲೆಂದೂ ಕಣ್ತುಂಬಿ ಬರುವುದು
ಅವರ ಸ್ಥಾನವನು ಇನ್ಯಾರೂ ತುಂಬರು

ಅಂಥ ಚೇತನವು ಚಿರಾಯುವಾಗಿರಬೇಕು
ನೊಂದ ಮನಗಳನು ಹುರಿದುಂಬುತಿರಬೇಕು
ಮುಂದೆಂದೂ ಸಿಗದಂಥ ನಿಷ್ಕಪಟ ಪ್ರೀತಿ
ಬಯಸುವುದ ಕಸಿಯುವುದೇ ದೇವನಾ ನೀತಿ

ಮುದ್ದು ಕಂದ

ಅತ್ತುಬಿಡು ಓ ಕಂದ ಅಳುವಿಲ್ಲೇ ಮುಗಿಯಲಿ
ನಾಳೆಯ ಹಾದಿಯಲಿ ನಗುವೇ ತುಂಬಿರಲಿ
ನಿನ್ನ ಮನದಿಂಗಿತವ ಯಾರು ಬಲ್ಲವರಿಲ್ಲಿ?
ಅಳುವಿನ ಕಾರಣವ ನಾ ಎಂತು ತಿಳಿಯಲಿ?

ಕ್ಷಣಕೊಮ್ಮೆ ಅಳುತಿರುವೆ ಕ್ಷಣಕೊಮ್ಮೆ ನಗುವೆ
ದುಃಖದಾಚೆಗೆ ಸುಖವು ಎಂದು ಸಾರುತಲಿರುವೆ
ಅವರಿವರ ಕೈ ಮೇಲೆ ಆಡಿ ಬೆಳೆಯುತಲಿರುವೆ
ಎಲ್ಲರ ನಡುವಲೂ ನನ್ನ ಗುರುತಿಟ್ಟಿರುವೆ

ಕಣ್ಣಲ್ಲೇ ಕರೆದು ನೀ ಮುದ್ದಾಡು ಎನುತಿರುವೆ
ಎತ್ತಿಕೊಂಡರೆ ನನ್ನ ಜಡೆಯ ಹಿಡಿದೆಳೆಯುವೆ
ಕೆನ್ನೆಯ ಮುದ್ದಿಸುತ ಕುಂಕುಮವ ಅಳಿಸುವೆ
ಸರವ ಜಗ್ಗುತಲಿ ಮುಡಿದ ಹೂ ಕೀಳುವೆ

ನಿನ್ನ ಆಟಗಳೆಲ್ಲ ಹೆತ್ತ ಕರುಳಿಗೆ ಚೆಂದ
ಮುದ್ದಾಗಿ ಮಡಿಲಲ್ಲಿ ಮಲಗಿರುವ ಚಂದ್ರ
ಕಣ್ಣಲ್ಲಿ ಹೊಳೆಯುತಿದೆ ಮುಗ್ಧತೆಯ ಪ್ರತಿಬಿಂಬ
ಎಲ್ಲರೂ ಹೀಗಿರೆ ಈ ಜಗವೆಷ್ಟು ಅಂದ

ವಂಚನೆಯ ಒಂದೆಳೆಯು ಹುಡುಕಿದರೂ ಸಿಗದು
ಪುಟ್ಟ ತೆಲೆಯೊಳಗೆ ಯೋಚನೆಯು ಏನಿಹುದು?
ಎಲ್ಲಕೂ ಅಸ್ತ್ರವದು ಅಳುವೊಂದೇ ನಿನಗೆ

ಸಂತೈಸಿ ಸೋತಿಹೆನು ವೇಳೆಯಲ್ಲವು ನಿನಗೆ

ನೀನು ಜನಿಸಿದ ಮೇಲೆ ದಿನಚರಿಯೆ ಬದಲಾಯ್ತು
ಕೆಲಸ ಕಾರ್ಯಗಳೆಲ್ಲ ನೀನೆಣಿಸಿದಂತಾಯ್ತು
ಅರೆ ಗಳಿಗೆಯೂ ನನ್ನ ಬಿಡಲಾರೆ ಎನುತಿರುವೆ
ನನಗೆ ಬಿಡುವಾಗುವುದು ನೀ ಮಲಗಿದಾಗಲೇ

ಕಣ್ಣಿಗೆ ಹಬ್ಬ ನೀ ಅಂಬೆಗಾಲಿಡುವಾಗ
ಮನೆತುಂಬ ಬೆಳಕು ನೀ ಕಿಲಕಿಲನೆ ನಗುವಾಗ
ಮನೆ ಮನವ ಬೆಳಗುತಿಹ ನೀನೇ ನಂದಾದೀಪ
ನಿನ್ನಲ್ಲೇ ಕಾಣುವೆನು ಭಗವಂತನ ರೂಪ

ತೊದಲು ನುಡಿಗಳನೆಲ್ಲ ನಾ ತಿದ್ದಿ ಕಲಿಸುವೆ
ಎಡವಿ ಬೀಳಲು ನಿನ್ನ ಕೈ ಹಿಡಿದು ನಡೆಸುವೆ
ಏಳು ಬೀಳಿನಲೆಲ್ಲ ನಾ ಜೊತೆಯಿರುವೆ ಕಂದನೆ
ಬೆಳೆಯುತಿರು ನೀನೆಂದು ಹಾಗೆಯೇ ಸುಮ್ಮನೆ

ಮನವಿರಲಿ ಮಗುವಂತೆ ನೀನೆಷ್ಟು ಬೆಳೆದರೂ
ಬಾಂಧವ್ಯ ಬೆಸೆದಿರಲಿ ನೀನೆಲ್ಲೇ ಇದ್ದರೂ

ಮುಸ್ಸಂಜೆ

ಬಾಳ ಮುಸ್ಸಂಜೆಯಲಿ ನಾನು ನಿಂತಿರುವೆ
ಅರುಣೋದಯದ ಕನಸ ಕಾಣದಾಗಿರುವೆ
ನಿನ್ನೆಗಳ ಕಹಿ ನೆನಪು ನನ್ನೊಂದಿಗಿದೆ
ನಾ ಬಂದ ದಾರಿಯ ಹಿಂತಿರುಗಿ ನೋಡುತಿಹೆ

ನಾ ಬಂದೆ ಕಲ್ಲುಮುಳ್ಳುಗಳ ಹಾದಿಯಲಿ
ಎಡವಿರಬಹುದೇ ನಾನಿಟ್ಟ ಹೆಜ್ಜೆಯಲಿ
ಯೋಚಿಸಿದರೂ ನಾ ಹೇಳುವುದು ಯಾರಲ್ಲಿ?
ಒಂಟಿ ಪಯಣಿಗ ನಾನು ಬಾಳ ಪಥದಲ್ಲಿ

ಎಷ್ಟು ಕಷ್ಟಗಳ ದಾಟಿ ನನಗಿಂದು ಈ ಸ್ಥಿತಿ
ಸತಿಸುತರ ಕಳಕೊಂಡು ನನ್ನ ಬಾಳು ಈ ರೀತಿ
ಕಾಡು ಬಾ ಎಂದು ಕರೆಯುತಿದೆ ನನ್ನ
ಊರು ಹೋಗೆಂದು ಅಟ್ಟುತಿದೆ ಬೆನ್ನ

ತಿರುಗಿ ನೋಡದಿರೆನ್ನ ಓ ಪುಟ್ಟ ಮಗುವೆ
ನೋಡಿದರೆ ಬಾಲ್ಯದಲೆ ವಿರಾಗಿಯಾಗುವೆ
ನೀನಿನ್ನು ಬದುಕಲ್ಲಿ ಅಂಬೆಗಾಲಿಡುತಿರುವೆ
ರಾಶಿ ಅನುಭವಗಳು ನಿನಗಾಗಿ ಕಾದಿವೆ

ನೀ ನಡೆದುದು ಬಲು ಸ್ವಲ್ಪ ದಾರಿ
ಸಾಗಬೇಕಾದ ದಾರಿ ಇದೆ ದುಬಾರಿ
ಹೂವುಗಳೆ ಹಾಸಿರಲಿ ನೀ ನೋಯದಂತೆ
ಎಚ್ಚರದಿ ಹೆಜ್ಜೆಯಿಡು ಮನಃ ಸಾಕ್ಷಿಯಂತೆ

Saturday, September 20, 2008

ಚಂದಿರನೆ

ಹೇಳು ಚಂದಿರನೆ ಹೇಳು ಸುಂದರನೆ
ಯಾರಿಗಾಗಿ ಬೆಳದಿಂಗಳು?
ಹೇಳು ಹುಣ್ಣಿಮೆಯೆ ಹೇಗೆ ಬಣ್ಣಿಸಲಿ
ನಿನ್ನಿಂದಲೇ ಚೆಂದ ಇರುಳು!

ನಿನ್ನ ನೋಡುತಲೆ ಬಿರಿವ ನೈದಿಲೆಯು
ಚೆಲುವ ತೋರುತಲಿ ನಿಂತಿದೆ
ನೀ ಬಿಸಿಯ ಸೋಕುತಲೇ ಎಲ್ಲೋ ಪ್ರೇಮಿಗೆ
ಪ್ರಿಯತಮೆಯ ನೆನಪು ತಂದಿದೆ

ಉಕ್ಕಿ ಬರುತಲಿವೆ ಶರಧಿಯಲೆಗಳು
ನಿನ್ನ ಸಂಧಿಸುವ ಆಸೆಗೆ
ಅಲೆಗಳಿಲ್ಲಿ ನೀನೆಲ್ಲೋ ದೂರದಲಿ
ಮಿಲನ ಸಾಧ್ಯವೇ ವಾಸ್ತವದಲಿ?

ಚಕೋರೆ ಕರೆದಿಹಳು ದಿನವೂ ನಿನ್ನನು
ನೀನೇ ಸ್ಫೂರ್ತಿ ಆ ಗಾನಕೆ

ನೀ ದಿನವೂ ಬಂದರೆ ಮರೆಯಾದ ತಾರೆಗಳ
ತೋರುವವರಾರು ಈ ಲೋಕಕೆ


ಬಾಡಿಗೆಯ ಬೆಳಕಲೇ ನೀನಿಷ್ಟು ಶೋಭಿಸುವೆ
ನಿನಗ್ಯಾಕೆ ಸ್ವಂತ ಬೆಳಕಿಲ್ಲ?
ಅದೇನೇ ಇರಲಿ ಕಾವ್ಯಲೋಕದಲಿ
ನೀನಿಲ್ಲದೇ ಪ್ರೇಮ ಗೀತೆಯಿಲ್ಲ

ನಿನ್ನ ಕೆಲಸವದು ಯಾರಿಂದಲಾಗದು
ಇರುಳ ಬೆಳಗುವ ಕಾಯಕ
ಬಾರೋ ಚಂದಿರನೆ ಹಾಲ್ಬೆಳಕ ಚೆಲ್ಲುತಲಿ
ಆಗು ನೀಲಾಂಬರದ ನಾಯಕ

ಗೊಂದಲ

ಹೀಗೊಂದು ಗೊಂದಲ ಮೂಡಿತು ಏಕೆ
ಏನದು ಬಂಧವು ನಮ್ಮಯ ನಡುವೆ
ಜೋಕಾಲಿಯಾಗಿದೆ ಮನ ಓಲಾಡಿ
ಹಿಡಿದಿಡಲಾರೆ ಭಾವದ ಬಂಡಿ


ನೀ ಹತ್ತಿರವಿದ್ದರೆ ಮಾತೇ ಬರದು

ದೂರವಾದೊಡೆ ನಿಂದೇ ಕೊರಗು
ಮಾತಿಗೆ ಮೀರಿದ ಏನೋ ಸೆಳೆತ
ನಡೆದಿದೆ ಹೃ
ದಯದ ಮೂಕ ಸಂವಾದ

ಎಲ್ಲಿಯ ನೀನು ಎಲ್ಲಿಯ ನಾನು
ಬೆರೆತಂತಿದೆ ಮನ ಹಾಲು ಜೇನು
ಏನಿದೆ ಹೆಸರು ನಮ್ಮಯ ನಂಟಿಗೆ
ರಾಧಾಮಾಧವರೊಲವಿನ ಹಾಗೆ

ನೀನೊಂದರೆ ಎಲ್ಲೋ ಮಿಡಿವುದು ಹೃದಯ

ನಿನ್ನ ಸುಖದಲ್ಲೇ ನನ್ನ ಹರುಷವು ಗೆಳೆಯ
ಹಗಲೆಲ್ಲವೂ ಕಾಡಿದೆ ನಿಂದೇ ನೆನಪು
ಇರುಳೇ ಸಾಲದು ಕಾಣಲು ಕನಸು

ಎದೆಯ ಗುಡಿಯಲಿ ನೀನೇ ದೇವತೆ
ಬೆಳಗಿಹುದಲ್ಲಿ ನಮ್ಮ ಸ್ನೇಹದ ಹಣತೆ
ನಮ್ಮಯ ಬಾಳಿನ ಹಾದಿಯೇ ಬೇರೆ
ನೀನೆಂದೂ
ನನಗೆ ನಿಲುಕದ ತಾರೆ


Sunday, August 31, 2008

ಇನಿಯ

ನೀ ಹರಿಸಿದೆ ಪ್ರೀತಿಯ ಹೊನಲ ನನ್ನೆಡೆಗೆ
ನಾ ಏನು ತಾನೇ ಕೊಡಬಲ್ಲೆ ಇನಿಯ ನಿನಗೆ
ನಿನ್ನೊಲವ ಸವಿ ಮಾತು ಕಂಪಿಸುತಲಿಹುದು
ನನ್ನೆದೆಯ ಗೋಡೆಗೆ ಬಡಿದು ಬಡಿದು

ಕೊಡಲು ನಿನಗೆಂದು ನನ್ನಲೇನೂ ಇಲ್ಲ
ನನ್ನೆಲ್ಲವೂ ನೀನಾಗಿ ನಿಂತಿರುವೆಯಲ್ಲ

ಮನದ ನೋವೆಲ್ಲಕೂ ನೀನೇ ಸಂಜೀವಿನಿ
ಆವರಿಸಿ ಎಲ್ಲವನು ನನ್ನನ್ನೇ ಕೆಳದೆ ನೀ

ಮುಂಜಾನೆ ಕಣ್ಬಿಡುವೆ ನಿನ್ನ ನೆನಪ ಹೊತ್ತು
ಇರುಳು ಮಲಗುವೆ ನಿನ್ನ ರೆಪ್ಪೆಯಲಿ ಬಚ್ಚಿಟ್ಟು
ಅಲ್ಲಿಲ್ಲಿ ಎಂದಿಲ್ಲ ನೋಡುವೆನು ಕಣ್ಬಿಟ್ಟು

ನಿನ್ನ ನೆನಪು ಹಿಂಡಿದೆ ನನ್ನ ಮನವ ಸುಟ್ಟು

ನಿನ್ನ ನಡತೆಗಳ ಏನೆಂದು ಹೊಗಳಲಿ
ನೀ ತೊರೆಯೆ ವಿರಹವ ಹೇಗೇ ನಾ ಸಹಿಸಲಿ
ನಿನ್ನ ಸಂಗವನೆಂದೂ ಬಯಸಿರುವೆ ಬಾಳಲಿ
ನಿಯಮಗಳ ದಾಟಿ ನಾ ಬರಲಾಗದಿಲ್ಲಿ

ಬಲಿಯಾಗದಿರಲೆಂದು ನನ್ನ ನಿನ್ನೊಲವು
ಸವಾಲುಗಳ ಗೆದ್ದು ನಾವ್ ತಳೆದ ನಿಲುವು
ಮನದ ಇಂಗಿತಕೆ ನ್ಯಾಯ ನೀ ಸಲ್ಲಿಸು
ಗೆದ್ದು ಎಲ್ಲವನೂ ಪ್ರೇಮ ಧ್ವಜ ಹಾರಿಸು

ನನ್ನನೇಕೆ ತೊರೆದೆ

ಬಿಟ್ಟು ಕೊಟ್ಟೆ ಗೆಳತಿ ನಿನ್ನ ಬೇರೆ ಮನಸಿಗೆ
ಕೊಟ್ಟು ಕೆಟ್ಟೆ ನನ್ನನೆಲ್ಲ ನಿನ್ನ ಬದುಕಿಗೆ
ಕೈಗೆ ಬಂದ ಪುಷ್ಪವದು ಮುಡಿಯ ಸೇರದೆ
ಹೋಯಿತೆಲ್ಲೋ ಬೇರೆ ಜಗವ ಅರಸಿ ಕಾಣದೆ

ನನ್ನ ಪ್ರೀತಿಯಲ್ಲಿ ಕಂಡ ಕೊರತೆ ಏನದು?
ಎಲ್ಲೇ ಹೋಗು ಇಷ್ಟು ಒಲವು ಎಲ್ಲೂ ಸಿಕ್ಕದು
ಬೆಳ್ಳಗಿರುವುದೆಲ್ಲ ಹಾಲು ಎಂದು ನಂಬಿದೆ
ಸುಳ್ಳು ಪ್ರೀತಿಯಲ್ಲಿ ಬಿದ್ದು ನಾನು ನರಳಿದೆ

ನನ್ನ ಎದೆಗೆ ಕನ್ನ ಕೊರೆದು ಒಳಗೆ ಬಂದೆ ನೀ
ನನ್ನಿಂದಲೇ ನನ್ನ ಕದ್ದು ದೋಚಿಕೊಂಡೆ ನೀ
ನೀನು ತೊರೆದು ಹೋದ ಮೇಲೆ ಖಾಲಿಯಾದೆ ನಾ
ನನ್ನನೇ ಹುಡುಕಿ ಹುಡುಕಿ ಸೋತು ಹೋದೆ ನಾ

ನೀನು ಬಿಟ್ಟು ಹೋದರೇನು ನೆನಪು ಇಲ್ಲಿದೆ
ಕಸಿಯಲಾರೆ ನೀನು ಅದನು ಇಂದೂ ಹಸಿರಾಗಿದೆ
ಎದೆಯ ಕದಕೆ ನೀನು ಕಟ್ಟಿ ಹೋದ ತೋರಣ
ಬಾಡದೇನೆ ಹಾಗೇ ಇದೆ ನನ್ನೊಲವೆ ಕಾರಣ

ಒಂದೇ ಹೂವು ಎರಡು ಬಾರಿ ಎಂದೂ ಅರಳದು
ಬದುಕಲ್ಲಿ ಮತ್ತೆ ಮತ್ತೆ ಒಲವುಬಾರದು
ಮೊದಲ ಪ್ರೀತಿಯಲ್ಲೆ ಸೋತು ಮಸುಕು ಕವಿದಿದೆ
ನಸುಕಿನಲ್ಲೂ ಕಣ್ಬಿಟ್ಟರೆ ನಿನ್ನ ಮುಖವೆ ಕಂಡಿದೆ

ಚೂರಾದರೂ ಹೃದಯವಿದು ನಿಂಗೇ ಮಿಡಿವುದು
ನೀನೆಷ್ಟು ನೋವ ಕೊಟ್ಟರೂ ನಿಂಗೆಂದೂ ಶಪಿಸದು
ನಿನ್ನ ನೆನಪಿನಲ್ಲೇ ನಾನು ಬದುಕುದೂಡುವೆ
ಬಿಟ್ಟು ಕೊಟ್ಟ ಸಿಹಿಯ ನೋವಿನಲ್ಲೇ ನರಳುವೆ

ಗಿಣಿಯೆ ನೀ ಹಾರಿ ಬಾ

ಹಾರಿ ಬಾ ಅರಗಿಣಿಯೆ ನೀ ಹಾರಿ ಬಾ
ಎಲ್ಲ ಬಂಧನ ತೊರೆದು ಪಂಜರವ ನೀ ಮುರಿದು
ನಿನ್ನಂತೆ ಬದುಕಲು ನೀ ಹಾರಿ ಬಾ
ಚಿತ್ತಾರ ಗಗನವಿದೆ ವಿಸ್ತಾರ ಭೂಮಿಯಿದೆ
ದುಸ್ತರದ ಬದುಕೇಕೆ ನೀ ಹಾರಿ ಬಾ

ಪ್ರೀತಿಯದು ಪಂಜರ ಸ್ನೇಹವದು ಅಂಬರ
ಪ್ರೀತಿ ಸ್ನೇಹದ ನಡುವೆ ನೆಲಮುಗಿಲ ಅಂತರ
ಒಲವೊಂದು ಬಂಧನ ಗೆಳೆತನವೆ ನಂದನ
ಬಂಧನವ ಬಿಡಿಸಿ ನೀ ನಂದನಕೆ ಹಾರಿ ಬಾ

ಒಲವನ್ನು ತೋರಲು ಬಂಧಗಳ ಹೊರೆಯೇಕೆ?
ಸೆರೆಯಲ್ಲೇ ಬಳಲುವ ಸಂದಿಗ್ಧ ಬದುಕೇಕೆ?
ದೇಹಕಿದೆ ನಿರ್ಬಂಧ ಮನಸ್ಸೆಂದು ಸ್ವಚ್ಛಂದ
ಸ್ವೇಚ್ಛೆಯ ಲೋಕದಲಿ ವಿಹರಿಸೆ ಹಾರಿ ಬಾ

ತಮ್ಮ ತನವನು ಕಸಿದು ವೈಭೋಗವಿತ್ತರೆ
ಹಾರಿಹೋಗುವ ಆಸೆ ಮನವೆಲ್ಲ ತುಂಬಿರೆ
ಅನ್ನವದು ಒಗ್ಗೀತೆ ದೇಹಕದು ದಕ್ಕೀತೆ
ಉಕ್ಕುತಿಹ ಬಯಕೆಗಳ ದಕ್ಕಿಸಲು ಹಾರಿ ಬಾ

ಮುಗ್ಧತೆಯೆ ನಿನಗೆಂದು ಮುಳುವಾಗದಿರದಂತೆ
ಬಾಳಿನಾ ಬದ್ಧತೆಯ ಪೊರೈಸು ಬಿಡದಂತೆ
ಎಲ್ಲ ಕೋಟೆಯ ದಾಟಿ ಎಲ್ಲ ಭಾವವ ಮೀಟಿ
ಬಿದ್ದಲ್ಲೇ ಎದ್ದು ನೀ ಗೆದ್ದು ಬದುಕಲು ಬಾ

ಸಕಲ ಜೀವಿಗಳಲ್ಲು ಸ್ವಾತಂತ್ರ್ಯದಾ ಬಯಕೆ
ತಪ್ಪಲ್ಲ ಪೂರಕವು ಪ್ರಕೃತಿಯ ನಿಯಮಕೆ

ಪ್ರೀತಿಯನು ಬಂಧಿಸದೆ ನೀತಿಗಳ ಕೊಲ್ಲದೆ
ನೀತಿಯ ರೀತಿಯನು ಈ ಜಗಕೆ ಸಾರು ಬಾ

ತೊಳಲಾಟ

ನಟಿಸಬೇಡ ಒಲವೆ ನೀನು ಬಯಕೆಗೆಲ್ಲ ಪರದೆ ಎಳೆದು
ತುಂಟಾಟಕೆ ಮಿತಿ ಇರಲಿ ಬಯಸೋ ಮನವು ನರಳುವುದು

ಪ್ರೀತಿ ಹೂವ ತೋಟದಲ್ಲಿ ಬಾಡದಂತ ಹೂವು ನೀನು
ಅರಸಿ ಬಂದೆ ನಿನ್ನ ಸೇರೆ ಮುದುಡಿ ಕುಳಿತೆ ಸರಿಯೇನು?
ನೀಲಿ ಬಾನ ಅಂಗಳದಿ ಮಿನುಗುತಿರುವ ಚುಕ್ಕಿ ನೀನು
ಕೈಯ ಚಾಚಿ ಹಿಡಿಯ ಹೊರಟೆ ಮೋಡದಡಿಯೆ ಅವಿತೆಯೇನು?

ಹಸಿರು ಹುಲ್ಲು ಹಾಸ ಮೇಲೆ ಬಿಸಿಲಿಗ್ಹೊಳೆವ ಬಿಂದು ನೀನು
ಬೊಗಸೆ ತುಂಬ ಹಿಡಿಯಬಂದೆ ಕೊಸರಿಕೊಂಡು ಹೋದೆಯೇನು
ನೀರಿನಲ್ಲಿ ಬಳುಕುತಿರುವ ಚೆಂದದೊಂದು ಮೀನು ನೀನು
ಅಲೆಯಂತೆ ಜೊತೆಯಲಿದ್ದರೂ ನಿನ್ನ ಹೆಜ್ಜೆ ಹುಡುಕಲಾರೆನು

ಬೀಸಿ ಬಂದ ಗಾಳಿಯಲ್ಲಿ ತೇಲಿಬಂದ ಕಂಪು ನೀನು
ತನುವ ಚೆಲ್ಲಿ ನಿಂತೆ ಇಲ್ಲಿ ಸೋಕದಂತೆ ಹೋದೆಯೇನು?
ನಿನ್ನುಸಿರಿನ ಆವೇಗಕೆ ತೇಲಿ ಹೋದ ಎಲೆಯು ನಾನು
ಎಲ್ಲೆಲ್ಲೋ ಸುತ್ತಿ ಬಂದೆ ಇಲ್ಲಿ ನಿನ್ನನೆಲ್ಲೂ ಕಾಣೆನು

ಪ್ರೀತಿ ತೇರ ಶಿಖರದಲಿ ಕಂಗೊಳಿಸುವ ಕಲಶ ನೀನು
ಒಳಗಿದ್ದರೂ ಇಲ್ಲದಂತ ತುಳುಕುತಿರುವ ನೀರು ನಾನು
ದೇವಗೆಂದೆ ಹೊತ್ತು ತಂದ ಪ್ರೀತಿ ಹೂವ ಮಾಲೆ ನೀನು
ನಿನ್ನ ನಡುವ ಸುತ್ತಿ ಸುತ್ತಿ ಧನ್ಯವಾದ ನಾರು ನಾನು

ಕಣ್ಣ ಎದುರಿಗದ್ದರೂ ನಾ ನಿನ್ನ ಸೇರಲಾಗದೇ
ನೆರಳಂತೆ ಜೊತೆಯಲಿದ್ದರೂ ನಮ್ಮ ಮಿಲನವಾಗದೇ
ನದಿಯ ಎರಡು ದಡಗಳು ಒಂದಾಗಲಾರದೆಂದಿಗೂ
ತೋರಿಕೆಯ ಸೇತುವೆಯು ನಮ್ಮನೆಂದು ಸೇರಿಸದು

ನಿನ್ನ ನೆನಪು

ಎಲ್ಲಿಂದಲೋ ತಂಗಾಳಿ ಬೀಸಿ ಬಂತು
ನಿನ್ನಯ ನೆನಪೊಂದ ಹೊತ್ತು ತಂತು
ಮೊಗ್ಗಾದ ಮನವಿಂದು ಅರಳಿತಿಲ್ಲಿ
ನಿನ್ನನೇ ಸೇರುವ ಆತುರದಲ್ಲಿ

ಗಾಳಿಯ ಒಡಲಲ್ಲಿ ನಿಂದೇ ಉಸಿರು
ಸೋಕಲು ನನ್ನ ಮೈಮನ ನವಿರು
ತಂಪಿನ ಸ್ಪರ್ಶದಿ ಎನೋ ಹಿತವು
ಬಣ್ಣಿಸಲಾಗದ ಅತಿ ಸಂತಸವು

ನಿನ್ನ ನೆನೆಯುತಲೆ ಹೂವಾಗುವೆ ನಾನು
ಬಾಡುವ ಮೊದಲೇ ಪಡೆದುಕೋ ನೀನು
ನನ್ನಯ ಕಂಪು ಸೆಳೆಯದೇ ನಿನ್ನ
ಸವಿಯಲು ಬಾ ನೀ ಪ್ರೀತಿಯ ಜೇನ

ನನ್ನಯ ಬಾಳಿನ ಪ್ರತಿ ಪುಟದಲ್ಲಿ
ಬಗೆ ಬಗೆ ಬಣ್ಣವ ನೀ ತುಂಬುತಲಿ
ಹೊಸತನ ತಂದಿಹೆ ಪ್ರತಿ ಹೆಜ್ಜೆಯಲೂ
ಜೊತೆಯಲ್ಲೇ ಇರು ಪ್ರತಿ ಕ್ಷಣದಲ್ಲೂ

ನಿನ್ನೊಡನಾಟದ ಸುಂದರ ಗಳಿಗೆ
ನೆನೆದರೆ ನಗುವೆನು ನಾ ನನ್ನೊಳಗೆ
ನೆನಪಿನ ಕೊಳದಲಿ ನೀ ಜೀವಜಲ
ಮುಳುಗಿರೆ ನಾನು ಮರೆವೆನು ಎಲ್ಲ

ಬಾರದಿರಿ ಕನಸುಗಳೇ

ಕನಸುಗಳೆ ಬಾರದಿರಿ ಎನ್ನ ಮನದಂಗಳಕೆ
ನನಸಾಗೋ ಪರಿ ಇಲ್ಲ ಏತಕೀ ಬಯಕೆ
ಅಂಗಳದ ತುಂಬೆಲ್ಲ ನಿಮ್ಮದೇ ಗೋರಿಯಿದೆ
ಅದರೊಳಗೆ ಸಿಕ್ಕು ಕೊಳೆಯುವಿರಿ ಏಕೆ?

ಎಷ್ಟೊಂದು ಮನಸಿಹುದು ಎಷ್ಟೊಂದು ಬದುಕಿಹುದು
ಆಟವಾಡಲು ನಿಮಗೆ ನನ್ನ ಮನ ಬೇಕೆ?
ಮನದ ಕಣ್ಣನು ಮುಚ್ಚಿ ಕುಳಿತಿಹೆನು ನಾನಿಲ್ಲಿ
ನಿಮ್ಮ ಬರುವಿಕೆಯ ನೆನೆದು ಭಯದಲ್ಲಿ

ಬೀಜವನು ಬಿತ್ತುತಲಿ ಮರವಾಗಿ ಬೆಳೆಯದಿರಿ
ಮುಚ್ಚಿಹೋಗುವುದೆನ್ನ ಮನದ ಮನೆ ಬೆಳಕು
ಬೆಳಕು ಬರುತಿರಲೆಂದೆ ಮನದ ಬಾಗಿಲ ತೆರೆದೆ
ನುಗ್ಗಿ ಬರದಿರಿ ನೀವು ಅಷ್ಟೇ ಸಾಕು

ಉಗಮವೆಲ್ಲಿಹುದೋ ಅಂತ್ಯವಿಹುದಿಲ್ಲಿ
ನಿಮ್ಮ ಪೋಷಿಸಿ ಬೆಳೆಸಿ ನಾ ಸಾಕಲೆಲ್ಲಿ?
ಬಲವಿಲ್ಲ ತೋಳಿನಲಿ ಛಲವಿಲ್ಲ ಮನಸಿನಲಿ
ಸಾಕಾರವಿನ್ನೆಲ್ಲಿ ದುರ್ವಿಧಿಯ ಬಾಳಿನಲಿ

ಒಡೆದು ಗೋರಿಯನೆಲ್ಲ ಬೀಳ್ಕೊಡುವೆ ನಿಮ್ಮನ್ನು
ಹುಡುಕಿ ಹೋಗಿರಿ ನೀವು ಹೊಸ ತಂಗುದಾಣ
ಬಾರದಿರಿ ಕನಸುಗಳೆ ಮರಳಿ ನನ್ನಯ ಬಳಿಗೆ
ಖಾಲಿಯಾಗಿಯೇ ಇರಲಿ ನನ್ನ ಮನದಂಗಣ

Sunday, June 29, 2008

ನೋವು ನಲಿವು

ನೋವೆಲ್ಲ ನನಗಿರಲಿ ನಗುವೆಲ್ಲ ನಿನಗಿರಲಿ
ನಿನ್ನ ನಗುವಿನಲ್ಲೆ ನನ್ನ ನೋವೆಲ್ಲ ಮಾಸಲಿ
ಸಿಹಿಯೆಲ್ಲ ನಿನಗಿರಲಿ ಕಹಿಯೆಲ್ಲ ನನಗಿರಲಿ
ಸಿಹಿಕಹಿಯು ಬೆರೆತು ಬದುಕು ಬೇವು ಬೆಲ್ಲವಾಗಲಿ

ನೀ ಕಡಲು ನಾ ತೀರ ಇರುವೆ ಎಂದು ಜೊತೆಗೆ
ರಭಸದಲೆಯ ಅಪ್ಪುಗೆಗೆ ನನ್ನನ್ನೆ ಸವೆಸಿಬಿಡುವೆ
ನೀ ಬಾನು ನಾ ಮುಗಿಲು ಮುಟ್ಟುವಾಸೆ ನಿನ್ನನು
ಬೀಸಿ ಬಂದ ಗಾಳಿಗೆ ನಾ ಎಲ್ಲೋ ತೇಲುತಿಹೆನು

ನಾ ಮಳೆಯು ನೀಧರೆಯು ನನ್ನೆಲ್ಲ ಹೀರಿ ಬಿಡುವೆ
ಮೊದಲ ಮಳೆಯ ಮಣ್ಣ ಕಂಪು ಮಾತ್ರ ನನ್ನದಾಗಿದೆ
ದಿನವೆಲ್ಲ ನಾ ಸುರಿದು ತೊಳೆವೆ ನಿನ್ನ ಕೊಳೆಯ
ಬಾಯಾರದಿರು ನೀನೆಂದು ಸುರಿವೆ ವರ್ಷಧಾರೆಯ

ನಿನ್ನ ಬದುಕ ಖುಶಿಗಾಗಿ ನಾ ನನ್ನೆ ಧಾರೆ ಎರೆವೆ
ನಿನ್ನಾಸೆಯ ಸಾಕಾರಕೆ ನಾ ನನ್ನೆ ಬಲಿಯ ಕೊಡುವೆ
ನಿನ್ನ ಮಾತೆ ನನ್ನ ಮಾತು ಮಾತೇ ಮರೆತು ಹೋಗಿದೆ
ನಿನ್ನುಸಿರೇ ನನ್ನುಸಿರು ಉಸಿರಲ್ಲೇ ಕಲೆತು ಹೋಗಿಹೆ

ನನ್ನ ನಿನ್ನ ಈ ಬಂಧ ಬಿಡಿಸಲಾಗದೆಂದಿಗೂ
ದೇಹ ಆತ್ಮ ಬೆರೆತಂತೆ ಬೆರೆತು ಒಂದನೊಂದು
ಆತ್ಮ ತೊರೆದು ಹೋದೊಡೆ ದೇಹವಿಲ್ಲ ಇಲ್ಲಿ
ನೋವೆಲ್ಲ ದೇಹಕೆ ಆತ್ಮ ಅಮರ ಜಗದಲಿ

ಪ್ರೀತಿ ಬಂದಾಗ

ತಿಳಿಯಾದ ಎದೆಗೊಳವ ನೀ ಬಂದು ಕಲಕಿದೆ
ಹಾಯಾಗಿದ್ದ ನಾನಿಂದು ನಿನ್ನಿಂದ ನಲುಗಿ ಹೋದೆ
ಬಿಳಿ ಹಾಳೆಯಂತಿದ್ದ ನನ್ನ ಮನದ ಪುಸ್ತಕದೆ
ಎಲ್ಲಿಂದಲೋ ನೀ ಬಂದು ನಿನ್ನ ಹೆಸರ ಬರೆದೆ

ಇದೇ ಮೊದಲ ಬಾರಿ ನನಗೆ ಇಂಥ ಅನುಭವ
ಅರಿಯದೇ ಬಂದ ಪ್ರೀತಿ ತಂತು ಈ ಸಿಹಿ ನೋವ
ಏನೋ ಕಳೆದ ಏನೋ ಪಡೆದ ಮಿಶ್ರ ಭಾವನೆ
ಏನಾಗುತಿದೆ ನನ್ನೊಳಗೆ ಅರಿಯದಾದೆ ನಾನೇ

ಮುಚ್ಚಿದ್ದ ಎದೆಕದವ ನೀ ಬಂದು ತೆರೆದೆ
ನೀ ತಂದ ಹೊಸ ಬೆಳಕು ತನುಮನವ ತುಂಬಿದೆ
ಪ್ರೀತಿ ಕುರುಡು ಅನ್ನೋ ವಾದ ನಾನಿಂದು ಒಪ್ಪಲಾರೆ
ಅದೇ ಬೆಳಕು ಅದೇ ಬದುಕು ಅದರಿಂದಲೇ ಈ ಧರೆ

ಎದೆಯ ಹಕ್ಕಿ ಹಾರಾಡಿದೆ ತುಂಬಿ ಬಾನಿನಗಲ
ಮುಟ್ಟುವಾಸೆ ಮೇಲೇರಿ ನಿನ್ನೊಡನೆ ಬಿಳಿ ಮುಗಿಲ
ಒಲವು ಮೂಡಿ ಬಂದಾಗ ಜಗವೆಲ್ಲಾ ಸುಂದರ
ಪ್ರೀತಿ ತುಂಬಿದ ಕಣ್ಣಿಗೆ ಬದುಕು ಹೂವ ಹಂದರ

ಸುಂದರಿ

ಒಂದೇ ಒಂದು ಮಾತಿನಲ್ಲಿ ಹೃದಯ ವೀಣೆ ಮೀಟಿದೆ
ಒಂದೇ ಒಂದು ನೋಟದಲ್ಲಿ ಎದೆಯ ಕದವ ತಟ್ಟಿದೆ
ಒಂದೇ ಒಂದು ಸ್ಪರ್ಶದಲ್ಲಿ ಪ್ರೀತಿ ಪೂರ ಭರಿಸಿದೆ
ಒಂದೇ ಒಂದು ನಗುವಿನಲ್ಲಿ ಮನದ ಆಸೆ ತಿಳಿಸಿದೆ

ನಿನ್ನ ಹೆಜ್ಜೆ ದನಿಯೊಳಗೇ ಎದೆಯ ಬಡಿತ ಬೆರೆಯಿತು
ಕಾಲಗೆಜ್ಜೆ ದನಿಗಳಲ್ಲೇ ಹೃದಯ ಜಾರಿ ಹೋಯಿತು
ಕೈಯ ಬಳೆಯ ನಾದಕೇ ಮನವೆಲ್ಲ ಸೋತಿತು
ನಿನ್ನ ತನುವ ಪರಿಮಳಕೇ ಮೈಮರೆತೇ ಹೋಯಿತು

ಕೋಲ್ಮಿಂಚೋ ನಿನ್ನ ನಗುವೋ ಅರಿಯದಾದೆ ನಾನು
ಆ ಚಂದ್ರನ ಚಂದ್ರಿಕೆಯೇ ಸುರಿದಂತಿಹೆ ನೀನು
ನುಡಿಯಲ್ಲಿ ಅರಗಿಣಿಯೇ ಎರಕ ಹೊಯ್ದು ಜೇನು
ನಡಿಗೆಯಲ್ಲಿ ನವಿಲನ್ನೇ ನಾಚಿಸಿರುವೆ ನೀನು

ನಿನ್ನ ಕಣ್ಣ ಹೊಳಪಿನಲ್ಲಿ ಸೂರ್ಯ ಕರಗಿ ಹೋದ
ನಿನ್ನ ಒನಪು ಒಯ್ಯಾರಕೆ ಮದನ ಹಿಂದೆ ಬಿದ್ದ
ನನ್ನ ಕಣ್ಣೆ ಮೊದಲು ಕಂಡ ನಿನ್ನ ಅಂದ ಚೆಂದ
ಸೆರೆ ಹಿಡಿದೆ ಕಣ್ಣಿನಲ್ಲೇ ನೋಡಿದಾಗಿನಿಂದ

ಯಾವ ಕವಿಯು ಕಾಣದಂತ ಅಪರೂಪದಂದ ನಿಂದು
ನಾನು ಹೇಗೆ ಹೊಗಳಲಿ ಪದವೇ ನನಗೆ ಸಿಗದು
ಜೋಡಿಸಿಹೆ ಪದಗಳನು ಕವಿಯಾಗ ಹೊರಡಲೆಂದು
ನಿನಗಾಗೇ ಬರೆದಿರುವೆ ಈ ಪ್ರೀತಿಯ ಸಾಲನಿಂದು


ನೀನೆಲ್ಲಿರುವೆ

ಕಾಣದ ಸುಖವೆ ನೀನೆಲ್ಲಿರುವೆ
ಹುಡುಕುತ ನಿನ್ನ ನಾ ಬಳಲಿರುವೆ
ಬಯಸಿ ಬಂದರೆ ನೀ ಸಿಗಲಾರೆ
ಸಿಗದೆ ಹೋದರೆ ನಾ ಇರಲಾರೆ

ನನ್ನ ಪಾಲಿಗೆ ನೀ ಕಾಮನಬಿಲ್ಲು
ಸಂತೋಷದ ಕ್ಷಣಕೆ ಹೊಡೆಯುವೆ ಕಲ್ಲು
ಏನದು ಮುನಿಸು ನನ್ನಯ ಮೇಲೆ
ಏಕೆ ಕಾಡುವೆ ಮೀರುತ ಎಲ್ಲೆ

ಹಣದಲ್ಲಿರುವೆಯೋ ಗುಣದಲ್ಲೋ
ಋಣದಲ್ಲಿರುವೆಯೋ ಮರಣದಲೊ
ಬದುಕ ಹಾದಿಯನೇ ತೊರೆದಿಹೆ ನೀ
ನನ್ನಯ ಪಾಲಿಗೆ ಮರೀಚಿಕೆ ನೀ

ಒಲವಲಿ ಸುಖವಿದೆ ಎನ್ನುವರು
ಗೆಲುವಲಿ ಬಲವಿದೆ ಎನ್ನುವರು
ಒಲವು ಗೆಲುವುಗಳ ಬಲ ನೀನು
ಸೋಲು ನೋವುಗಳ ಕುಲ ನಾನು

ದ್ವೇಷ ಮತ್ಸರಗಳ ತೊರೆ ನೀನು
ಪಕ್ಷಪಾತಗಳ ಬಿಡು ನೀನು
ಸಹೃದಯದ ಬದುಕಿಗೆ ಹೆಜ್ಜೆಯಿಡು
ತೊರೆಯುವ ಮಾತ ಬಿಟ್ಟು ಬಿಡು

ನಿನ್ನ ರೂಪಗಳೋ ಹಲವು ಥರ
ಬಯಸೋ ಮನಸಿನ ಸಾಕ್ಷಾತ್ಕಾರ
ನೀನೇ ಇರದಿರೆ ಬದುಕಿದು ಭಾರ
ನಾಳೆಯ ಹಾದಿ ಸಾಗದು ದೂರ

ನಲ್ಲೆ

ಕೋಟಿ ತಾರೆ ಸೇರಿದರೂ ಒಬ್ಬ ರವಿಗೆ ಸಮನೆ
ನೂರು ಹಣತೆ ಬೆಳಗಿದರೂ ನಿನ್ನ ಕಣ್ಣ ಮುಂದೆ ಸೊನ್ನೆ
ಎನಿತು ಗಾನವಿದ್ದರೇನು ಕೋಗಿಲೆ ದನಿ ಮುಂದೆ
ಯಾವ ಮಾತು ರುಚಿಸದು ನಿನ್ನ ಸವಿಯ ಸೊಲ್ಲ ಮುಂದೆ

ಕಣ್ಗಳಲ್ಲೆ ಕವನ ಬರೆದೆ ಅದ ಓದಲು ನಾನಿಣುಕಿದೆ
ಕಣ್ಣ ತುಂಬ ನಂದೇ ಬಿಂಬ ನಾನೇ ಕವನವಾಗಿಹೆ
ನಿನ್ನ ತೋಳ ಸೆರೆಯಲ್ಲಿ ಜಗದ ಸುಖವೇ ಅಡಗಿದೆ
ಹೊರಬರುವ ಆಸೆಯಿಲ್ಲ ಅಲ್ಲೆ ನನ್ನ ಬದುಕಿದೆ

ನೆನೆ ನೆನೆದು ಖುಶಿಯ ಪಡುವೆ ಆ ಮೊದಲ ಚುಂಬನ
ಪ್ರತಿ ಬಾರಿಯ ಮುತ್ತಲ್ಲೂ ಏನೋ ಒಂದು ಹೊಸತನ
ನೀನಿಲ್ಲದ ಆ ಇರುಳಲಿ ಬೆಳದಿಂಗಳೂ ಸುಡುವುದು
ಹಿಂಡುತಿರುವ ನೆನಪಿನಿಂದ ಕಣ್ ರೆಪ್ಪೆಯೆ ಮುಚ್ಚದು

ತೇಲುವೆನೋ ಮುಳುಗುವೆನೋ ನಿನ್ನೊಲವ ಕಡಲಿನಲ್ಲಿ
ತೇಲುವಾಸೆ ಮುಳುಗಿಸದಿರು ಬಾಳ ನೌಕೆಯಲ್ಲಿ
ಇಷ್ಟು ಕಾಲ ಸರಿದರೂ ನಿನ್ನ ಪ್ರೀತಿಯಾಳ ಅರಿಯೆನು
ಆಳಕಿಳಿದು ತಿಳಿಯ ಕಲಕೋ ಸಾಹಸ ನಾ ಮಾಡೆನು

ನೂರಾರು ಜನ್ಮದಲ್ಲು ಕೂಡ ಸಿಗದು ಇಂಥ ಒಲವು

ನಿನ್ನ ಪ್ರೇಮ ಜಲದೆ ಮೀವ ಬಯಕೆ ಪ್ರತಿಯ ಸಲವು
ನಿನ್ನೊಲವಿನ ಋಣದ ಭಾರ ತೀರುವ ಪರಿಯೆಂತು?
ಹೃದಯದಲ್ಲೇ ಗುಡಿಯ ಕಟ್ಟಿ ಪೊಜಿಪೆ ನಾನೆಂದೂ

ಪ್ರಾಣ ಸಖಿ

ನೀನೇ ತಾನೇ ಕಲಿಸಿದೆ ಈ ಬದುಕ ಪ್ರೀತಿಸಲು
ಅಂದೇ ಶುರುವಾಯಿತು ಬದುಕಿನ ಹೊಸ ಮಜಲು
ಬಿಚ್ಚಿಟ್ಟೆ ನಿನ್ನೆದುರು ಮನದೊಳಗಿನ ಅಳಲು
ಹಗುರಾಯಿತು ಮನಸು ಹಿತನುಡಿಯ ಕೇಳಲು

ನಿನ್ನ ನಗುವು ನನ್ನೆಲ್ಲ ನೋವುಗಳ ಮರೆಸುವುದು
ಒಂದೊಂದು ಮಾತಿಗೂ ಎದೆಯ ವೀಣೆ ಮಿಡಿವುದು
ನನ್ನೊಳಗಿನ ರಾಗಕೆ ನೀನೇ ಭಾವವಾಗಿಹೆ
ಕುಣಿಯುತಿರುವ ಹೃದಯಕೆ ನೀನೇ ತಾಳವಾಗಿಹೆ

ಮಳೆಸುರಿದು ತಿಳಿಯಾದ ನೀಲಿ ಬಾನು ನೀನು
ಅಷ್ಟೇ ಶುಭ್ರ ನಿನ್ನ ಮನಸು ಹೇಳಲಿ ಇನ್ನೇನು
ನನ್ನ ದುಃಖ ಮರೆಸುವಲ್ಲಿ ಬಹುಪಾಲು ನಿನ್ನದೇ
ನಾನೆಂದೂ ಕೇಳಲಿಲ್ಲ ನಿನ್ನ ನೋವು ಏನಿದೆ?

ಪ್ರೀತಿ ಎನ್ನಲಾರೆ ಇದನು ಬರೀ ಸ್ನೇಹ ಅನ್ನುತಿಲ್ಲ
ಹೆಸರಿಲ್ಲದ ಈ ಬಂಧಕೆ ವಿಶ್ಲೇಷಣೆಯಿಲ್ಲ
ನನ್ನೆಲ್ಲಾ ನಡವಳಿಕೆಗೂ ನೀನೇ ಸ್ಫೂರ್ತಿ ತುಂಬಿಹೆ
ನಾ ಸೋತರೆ ಹುರಿದುಂಬುವ ಚೇತನವು ನೀನೆಯೆ

ನಿನ್ನ ನೋಡಲೆನಿಸಿದಾಗ ಹೃದಯದಾಳಕಿಳಿಯುವೆ
ಕಣ್ಮುಚ್ಚಿಯೆ ಬಿಡಿಸಿಹೆ ನಾ ನಿನ್ನ ಚಿತ್ರ ಅರಿಯದೆ
ಅಲೆಗಳಂತೆ ಕುಣಿದಿಹೆ ನೀ ಎದೆಯ ಕಡಲಿನಲ್ಲಿ
ಭೋರ್ಗರೆದಿದೆ ಕಡಲು ಆ ನಿನ್ನ ಕುಣಿತದಲ್ಲಿ

ನಿನ್ನ ಖುಶಿಯ ಕ್ಷಣಗಳಲ್ಲಿ ಸ್ವಲ್ಪ ಸಾಲ ಕೊಡುವೆಯಾ?
ಮರಳಿ ಪಡೆವ ಆಸೆ ಬಿಡು ನಾ ಸ್ವಲ್ಪ ಸ್ವಾರ್ಥಿ ತಿಳಿಯೆಯಾ?

ಬರಿಯ ನಲಿವು ಬೇಡುತಿಲ್ಲ ನೋವು ಕೂಡ ಹಂಚಿಕೋ
ನಿನ್ನ ನೋವು ನಲಿವೆಲ್ಲಕೂ ನಾನೂ ಭಾಗಿ ತಿಳಿದುಕೋ

Saturday, June 28, 2008

ಏಕಾಂತದ ಸಂಜೆ

ಈ ಸಂಜೆಯ ಏಕಾಂತವ ನಾ ಕಳೆಯಲಿ ಹೇಗೆ?
ನಿನ್ನ ನೆನಪು ತಂದಿದೆ ಇಂದು ಬಿಸಿಯುಸಿರ ಬೇಗೆ
ಚುಮುಗುಡುತಿಹ ಚಳಿಯಲ್ಲೂ ಬೆವರುತಿದೆ ತನುವು
ನೀರವತೆಯ ಒಂಟಿತನವೇ ತಂದಿದೆ ಈ ನೋವು

ಆ ರವಿಗೂ ದಣಿವಾಗಿ ಹೊರಟಿಹ ತೆರೆಮರೆಗೆ
ಆ ಚಂದ್ರನ ಆಗಮನಕೆ ಸಂತಸ ಭೂರಮೆಗೆ
ಹೊಂಬೆಳಕಿನ ಓಕುಳಿಗೆ ಕೆಂಪಾಯಿತು ಭೂಮಿ
ನಿನ್ನ ಕೆನ್ನೆಯ ನೆನಪಾಯಿತು ಕಾದಿಹನು ಪ್ರೇಮಿ

ಚಿಲಿಪಿಲಿಗುಟ್ಟುತ ಗೂಡನು ಅರಸುತ ಹಾರಿವೆ ಹಕ್ಕಿಗಳು
ದಿನವಿಡೀ ಜೊತೆಗೇ ಕಳೆದಿವೆ ನೋಡು ಪ್ರೀತಿಯ ಜೋಡಿಗಳು
ಎಲ್ಲಿಹೆ ನೀನು ಕಾಯುವುದೆನಿತು ಆವರಿಸುತಿದೆ ಇರುಳು
ವರುಷಗಳಂತೆ ಕಳೆದಿಹೆ ನಾನು ನೀನಿಲ್ಲದ ಆ ನಿಮಿಷಗಳು

ಆಟದ ಬಯಲನು ಬಿಟ್ಟು ಚಿಣ್ಣರು ಓಡಿವೆ ಮನೆಕಡೆಗೆ
ಸಜ್ಜಾಗುತಿವೆ ಮೈಶುಚಿಗೊಂಡು ಭಕ್ತಿಲಿ ದೇವರ ಭಜನೆಗೆ
ದೇವರ ಗುಡಿಯಲಿ ಬೆಳಗುತಿದೆ ಸಂಜೆಯ ನಂದಾದೀವಿಗೆ
ನಾನಿಲ್ಲೇ ಕುಳಿತು ಕಾದಿರುವೆ ನನ್ನಯ ಪ್ರೇಮದ ದೇವತೆಗೆ

ನಿನ್ನ ಹಾಡು


ನಿನ್ನೊಳಗಿಂದಲೆ ದನಿಯಿದು ಬಂದಿದೆ ಇಂಪಿನ ಹಾಡಾಗಿ
ಸರಿಗಮಗಳ ಗೋಜೇ ಇಲ್ಲದೆ ಪದಕೇ ಸ್ವರವಾಗಿ
ರಾಗದ ಜಾಡನು ಹಿಡಿದು ಹೊರಟೆ ಅರಿಯದೆ ದಂಗಾಗಿ
ಪ್ರೀತಿಯ ಹಾಡಿಗೆ ರಾಗವು ಏಕೆ ಹೇಳಿದೆ ಮನ ಬೀಗಿ

ಎಲ್ಲೇ ನಿಂತರು ಎಲ್ಲೇ ಕುಂತರು ಕಾಡಿದೆ ಈ ರಾಗ
ಭಾವ ವೈಭವಕೆ ರಾಗವು ಬೆರೆತರೆ ಸುಂದರ ಸಂಯೋಗ
ಎಂದೋ ಕೇಳಿದ ನೆನಪಿದು ಬರುತಿದೆ ಎಲ್ಲಿ ಯಾವಾಗ
ಹಾಡಿನ ವಸ್ತು ನಾನಿರಬಹುದೇ ನೆನೆದರೆ ಆವೇಗ

ರಾಗವ ತೆಗೆಯಲು ನಾನೂ ಹೊರಟೆ ದನಿಯೇ ಬರುತಿಲ್ಲ
ಕೋಗಿಲೆ ದನಿಗೂ ಕಾಗೆಯ ಸ್ವರಕೂ ಅಂತರ ಇಹುದಲ್ಲ
ಮತ್ತೆ ಕೇಳುವ ಕಲಿಯುವ ಆಸೆ ನೀನೇ ಇಲ್ಲಿಲ್ಲ
ನೀನಿರದಿರೆ ಏನು ನಿನ್ನುಸಿರಿದೆ ಇಲ್ಲಿ ಅಷ್ಟು ಸಾಕಲ್ಲ

ಎದೆಗೂಡಲ್ಲಿ ಮೊಳಗಿದೆ ಸ್ವರವು ಗುನುಗುತ ನಿನ್ನೀ ಹಾಡನ್ನು
ಹೃದಯದ ಬಡಿತವು ನೀಡಿದೆ ಇಲ್ಲಿ ರಾಗಕೆ ತಾಳವನು
ನರನಾಡಿಗಳಲ್ಲಿ ನೆತ್ತರು ಹರಿದಿದೆ ತುಂಬುತ ನಾದವನು
ಮೈಮನಸೆಲ್ಲಾ ಹಾಡೇ ತುಂಬಿದೆ ಮರೆಯಲಿ ಹೇಗಿದನು



ಕನಸಿನ ಕನ್ಯೆ


ಕನಸಲಿ ನೋಡಿದ ಮನವನು ಕಾಡಿದ ಹೆಣ್ಣು ಯಾರಿವಳು
ತುಟಿಯೆ ತೆರೆಯದೆ ಕಣ್ಣ ಸನ್ನೆಲೆ ಏನೋ ಹೇಳಿದಳು
ಅರಿಯದೆ ಏನೂ ಹೊರಳಿದೆ ನಾನು ಜಾಗರ ಇಡೀ ಇರುಳು
ನಿದ್ದೆಯ ಜೊತೆಗೆ ಆಟವ ಆಡಿ ನನ್ನ ನೆಮ್ಮದಿ ದೋಚಿದಳು

ಕಮಲದ ನಯನ ಚಿಟ್ಟೆಯ ರೆಪ್ಪೆ ಪಟ ಪಟ ಬಡಿಯುತಿದೆ
ಏನೋ ಹೇಳಲು ಹೊರಟ ತುಟಿಗಳು ಅರಿಯದೇ ನಾಚುತಿವೆ
ಕರಿಮುಗಿಲಂದದೆ ಹಾರುವ ಕುರುಳು ಮಲಗಿವೆ ಹಣೆ ಮೇಲೆ
ಸರಿಸುತಿದೆ ಅದ ಕೋಮಲ ಬೆರಳು ಮುದ್ದು ಸುಕೋಮಲೆ ಈ ಬಾಲೆ

ಕೆನ್ನೆಯ ನುಣುಪು ತುಟಿಗಳ ಹೊಳಪು ಓಕುಳಿಯಾಡುತಿವೆ
ದಾಳಿಂಬೆಯ ಕಾಳಿನ ಬಿಳಿ ಹಲ್ಲುಗಳು ಪಳಪಳ ಹೊಳೆಯುತಿವೆ
ಕನಸಿನ ಕನ್ಯೆಯ ಪಡೆವುದು ಹೇಗೆ ಯೋಚಿಸಿ ನಾ ಸೋತೆ
ಇರುಳದು ಸರಿದರೂ ಕನಸಿನ ಗುಂಗಲೇ ನಾ ಹಗಲೂ ಮೈಮರೆತೆ

ಆಪ್ತ ಮಿತ್ರ

ಯಾವ ಮೋಹಕ ಕ್ಷಣವು ಬೆಸೆಯಿತು ನನ್ನ ಇವನ ಸ್ನೇಹವ
ಯಾವ ಜನ್ಮದ ನಂಟೋ ಎನೋ ಬಿಡಿಸಲಾಗದೀ ಬಂಧವ
ಹೂವು ಹಾಲಿನ ಮನಸಿನವನು
ಜೇನು ನುಡಿಗಳ ಒಡೆಯನಿವನು
ಚಂದ್ರನಂತೆ ಹೊಳೆಯುವವನು
ನನ್ನ ಪೀತಿಯ ಗೆಳೆಯನಿವನು

ಕಡಲ ಅಲೆಗಳು ಇವನ ನಗುವು
ನೋಡಲೆನಗೆ ನಲಿವೋ ನಲಿವು
ಮಾಸದಿರಲಿ ಈ ನಗುಮೊಗವು
ಬರದಿರಲೆಂದೂ ಇವಗೆ ನೋವು

ಎಲ್ಲ ಬೆಳಕಿಗೂ ಇವನೇ ಕಿರಣ
ಎಲ್ಲ ಸಿಹಿಗೂ ಇವನೇ ಹೂರಣ
ಎಲ್ಲ ನಲಿವಿಗೂ ಇವನೇ ಕಾರಣ
ಎಲ್ಲ ನೋವಿಗೂ ಇವನೇ ಸಾಂತ್ವನ

ಇವಗೆ ಇಲ್ಲ ಯಾವ ಹೋಲಿಕೆ
ಬೇರೆ ಗೆಳೆತನ ಬೇಕು ಏಕೆ
ಇವನೇ ಸ್ಪರ್ಧಿ ಇವನ ಸ್ಥಾನಕೆ
ಸುಂದರ ಸ್ನೇಹದ ಹೂಬನಕೆ

ಎನ್ನ ನೆನಪಿನ ಬಾನಂಗಳದಲಿ
ಇವ ಬರೆದಿಹ ಚಂದದ ರಂಗೋಲಿ
ಅದರ ಸೊಬಗೆಂದು ಮಾಸದೇ ಇರಲಿ
ಈ ಸ್ನೇಹ ಅಜರಾಮರವಾಗಿರಲಿ

ಮುಂಜಾನೆ


ರವಿ ಮೂಡಿದ ಬೆಳಗಾಯಿತು
ಉಷೆ ಬಂದಳು ಹಗಲಾಯಿತು
ನಿಶೆಯ ನಶೆಯಾಟ ಮುಗಿಯಿತು
ಬಾನೆಲ್ಲ ರಂಗು ರಂಗೇರಿತು

ಹೊನ್ನಿನ ಕಿರಣ ಹಸಿರೆಲೆ ಮೇಲೆ
ಎಲೆ ಎಲೆ ಮೇಲೆ ಮಂಜಿನ ಮಾಲೆ
ಮೂಡಿತು ಅದರಲೇ ಕಾಮನಬಿಲ್ಲೆ
ಜೀರುಂಡೆಯ ದನಿ ಜೊತೆಜೊತೆಯಲ್ಲೇ

ಚಿಲಿಪಿಲಿಗುಟ್ಟುತ ಹಕ್ಕಿಯ ಕೊರಳು
ಹುಡುಕುತ ಹೊರಟಿವೆ ಕಡ್ಡಿ ಕಾಳು
ಸ್ವೇಚ್ಛೆಯ ಕುರಹು ಈ ಬಾನಾಡಿಗಳು
ಮನುಜನಿಗೇಕೆ ಬಂಧದ ಗೋಳು

ಮೊಗ್ಗನರಳಿಸಿತು ಕಿರಣದ ಚುಂಬನ
ಹುಡುಕುತ ಬಂದಿದೆ ಭ್ರಮರವು ಜೇನ
ಹೂದುಂಬಿಗಳ ಸುಮಧುರ ಮಿಲನ
ಸವಿಯುವ ನಯನಕೆ ಸುಂದರ ಸ್ವಪ್ನ

ದನಕರು ಹೊರಟಿವೆ ಹುಡುಕುತ ಮೇವು
ಕೊರಳಿನ ಘಂಟೆಯ ಢಣಢಣ ನಾದವು
ಗಿಡಗಂಟೆಗಳೂ ಉಲಿದಿವೆ ತಾವು
ಸುಂದರ ಸುಂದರ ಈ ಮುಂಜಾವು

ಅಗಲಿಕೆ

ಕನಸಿನಲ್ಲೂ ಕಾಡುತಿರುವ ನೆನಪು ನಿನ್ನದೇ
ಬಾಳೆಲ್ಲವ ಬರಿದಾಗಿಸಿ ನೀನೆಲ್ಲಿ ಅವಿತಿಹೆ?

ನಿದ್ದೆ ಅಮಲಿನಲ್ಲೂ ನನ್ನ ಹೀಗೇಕೆ ಕಾಡಿಹೆ?
ಎದ್ದು ಕುಳಿತರೆಲ್ಲ ಶೂನ್ಯ ಭ್ರಮೆಯು ನಿನ್ನದೇ
ನಾ ಕಂಡ ಮೊದಲ ಕನಸು ನೀನೇ ಪ್ರಿಯತಮೆ
ಧ್ಯಾನ ಧ್ಯೇಯ ನನ್ನ ಪಾಲಿಗೆಲ್ಲ ನೀನೆಯೇ

ಸುಮ್ಮನಿದ್ದ ಎದೆಯ ವೀಣೆ ತಂತಿ ಮೀಟಿದೆ
ಸರಿಗಮಗಳ ಬೆರೆಸಿ ಪ್ರೇಮ ರಾಗ ನುಡಿಸಿದೆ
ತೇಲಿ ಹೋದೆ ಅಂದು ನಾನು ನಾದದಲೆಯಲಿ
ವೀಣೆ ಒಡೆದೆ ತಂತಿ ಮುರಿದೆ ಪ್ರೇಮ ಮಣ್ಣಲಿ

ನಿನ್ನೊಲವ ಕಂಪು ನುಡಿಯ ಇಂಪು ಮರೆಯದಾದೆನು
ನಿನ್ನ ಸ್ಪರ್ಶ ತಂದ ಸೊಂಪು ಹಿತವ ಎಲ್ಲೂ ಕಾಣೆನು
ಎದಯಲಿಂದು ಮೂಕ ರಾಗ ಕೇಳು ಗೆಳತಿಯೇ
ಕೇಳದಾದೆ ಹೇಳದಾದೆ ಪ್ರೇಮಿಗೀಗತಿಯೇ

ನನ್ನ ಚಿತೆಯ ಬೆಂಕಿಯಲ್ಲಿ ನಿನ್ನ ಬಾಳು ಬೆಳಗಲಿ
ಭಸ್ಮದೆಲ್ಲ ಕಣ ಕಣವೂ ನಿಂದೇ ಹೆಸರಲಿ
ತೊಳೆದುಬಿಡು ಎಲ್ಲವನ್ನೂ ನೆನಪ ಹೊಳೆಯಲಿ
ಮಗುವಾಗಿ ಹುಟ್ಟಿ ಬರುವೆ ನಾನು ನಿನ್ನ ಮಡಿಲಲಿ

ಮನದನ್ನೆ

ಬೆಳಕೇ ಇರದ ಬಾಳಿನಲ್ಲಿ ನಿನ್ನ ಕಣ್ಣೇ ಬೆಳಕು
ಮೌನದ ಬೆಂಗಾಡಿನಲ್ಲಿ ನಿನ್ನ ಉಸಿರೇ ಪಲುಕು
ನೊಂದು ಬೆಂದ ಈ ಮನಕೆ ನಿನ್ನ ನಗುವೇ ಬದುಕು
ಹೆಜ್ಜೆಯಿಡಲು ಬರುವೆ ಒಡನೆ ಜೊತೆಯ ನೀಡು ಅದಕೂ

ನಿನ್ನ ಸಂಗದೆ ಮಾತೇ ಬೇಡ ಮೌನವೇ ಹಿತಕರ
ಒಂದು ನೋಟದ ಖುಶಿಯೆ ಸಾಕು ಆ ಕ್ಷಣವೇ ಸುಮಧುರ
ನಿನ್ನ ಕಣ್ಣ ಕಾಂತಿಯಲ್ಲಿ ತುಳುಕಿದೆ ಸಪ್ತ ಸಾಗರ
ನಗುವಿನಲ್ಲೇ ಹೊಳೆಯುತಿಹನು ಹುಣ್ಣಿಮೆಯ ಚಂದಿರ

ನೋವಿನಲ್ಲೂ ನಲಿವಿನಲ್ಲೂ ಕೈಯ ಬಿಡೆನು ಎಂದೆ
ಕೊಟ್ಟ ಮಾತು ಏನಾಯಿತು ನೀ ಎಲ್ಲಾ ಮರೆತು ನಿಂದೆ
ಎನಿತು ದೂರವಿದ್ದರೇನು ಮೈಮನದೆ ನೀ ತುಂಬಿದೆ
ನನ್ನ ಪ್ರಾಣ ಪುಷ್ಪವನ್ನೆ ನಿನ್ನ ಪ್ರೇಮ ಪೊಜೆಗೆ ತಂದೆ

ತಳ್ಳದಿರು ದೂರ ಎನ್ನ ಸಹಿಸೆ ನಾ ಅನಾದರ
ಒಲವ ಕುಡಿಯ ಚಿವುಟಿ ಹೊರಟೆ ಎನ್ನ ಬಿಟ್ಟು ದೂರ
ಸತ್ತು ಸತ್ತು ಬದುಕಿ ಉಳಿದೆ ನಾ ನಿನಗೋಸ್ಕರ
ಆದರಿಂದು ಬದುಕಿ ಸತ್ತೆ ನೀನಿಲ್ಲದೆ ನಾ ನಶ್ವರ